ಸಾರಾಂಶ
ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಿಳಿ ಬಣ್ಣದ ಮಧುಬನಿ ಸೀರೆಯಲ್ಲಿ ಮಿಂಚಿದರು. ಬಿಹಾರದ ಸಾಂಪ್ರದಾಯಿಕ ಕಲೆ ಮಧುಬನಿಯ ಚಿತ್ತಾರವಿರುವ ಬಿಳಿ ಬಣ್ಣದ, ಗೋಲ್ಡನ್ ಬಾರ್ಡರ್ ಸೀರೆ, ಕೆಂಪು ರವಿಕೆ ಧರಿಸಿ ಬಂದಿದ್ದ ಸಚಿವೆ, ಅದರ ಜೊತೆಗೆ ಒಂದು ಶಾಲು ಧರಿಸಿ ಗಮನ ಸೆಳೆದರು.
ನವದೆಹಲಿ : ತಮ್ಮ ದಾಖಲೆಯ 8 ನೇ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಿಳಿ ಬಣ್ಣದ ಮಧುಬನಿ ಸೀರೆಯಲ್ಲಿ ಮಿಂಚಿದರು. ಬಿಹಾರದ ಸಾಂಪ್ರದಾಯಿಕ ಕಲೆ ಮಧುಬನಿಯ ಚಿತ್ತಾರವಿರುವ ಬಿಳಿ ಬಣ್ಣದ, ಗೋಲ್ಡನ್ ಬಾರ್ಡರ್ ಸೀರೆ, ಕೆಂಪು ರವಿಕೆ ಧರಿಸಿ ಬಂದಿದ್ದ ಸಚಿವೆ, ಅದರ ಜೊತೆಗೆ ಒಂದು ಶಾಲು ಧರಿಸಿ ಗಮನ ಸೆಳೆದರು.
ಪ್ರತಿ ಸಲ ಬಜೆಟ್ ಮಂಡನೆ ದಿನ ವಿಭಿನ್ನ ಶೈಲಿಯ ಸಂಪ್ರದಾಯ ಸೀರೆ ಧರಿಸಿ ಬಂದು ನಿರ್ಮಲಾ ಸೀತಾರಾಮನ್ ಗಮನ ಸೆಳೆಯುತ್ತಾರೆ. ಜೂನ್‌ನಲ್ಲಿ ಮಂಡಿಸಿದ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ನಲ್ಲಿ ಕರ್ನಾಟಕದ ಮೈಸೂರು ಸಿಲ್ಕ್ಸ್ ಸೀರೆ ತೊಟ್ಟು ಮಿಂಚಿದ್ದರು.
ಪದ್ಮಶ್ರೀ ದುಲಾರಿ ದೇವಿ ನೀಡಿದ್ದ ಸೀರೆ
ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ತೊಟ್ಟಿದ್ದ ಸೀರೆಯನ್ನು 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ದುಲಾರಿ ದೇವಿ ಉಡುಗೊರೆಯಾಗಿ ನೀಡಿದ್ದರು. ಸಚಿವೆ, ಬಿಹಾರದ ದುಲಾರಿಯವರ ಮಿಥಿಲಾ ಆರ್ಟ್ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಸೀರೆಯನ್ನು ಉಡುಗೊರೆ ಯಾಗಿ ನೀಡಿದ್ದರು. ಮೂಲಗಳ ಪ್ರಕಾರ ದುಲಾರಿ ದೇವಿಯವರು ನಿರ್ಮಲಾ ಅವರ ಬಳಿ ಬಜೆಟ್ ದಿನದಂದು ಇದೇ ಸೀರೆಯನ್ನು ಧರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಯಲ್ಲಿ ನಿರ್ಮಲಾ ಅದೇ ಸೀರೆಯನ್ನು ತೊಟ್ಟಿದ್ದಾರೆ.
ದುಲಾರಿ ದೇವಿ ಸಂತಸ
ಪಟನಾ: ತಾವು ಉಡುಗೊರೆಯಾಗಿ ನೀಡಿದ್ದ ಸೀರೆಯನ್ನು ಸಚಿವೆ ಬಜೆಟ್ ಮಂಡನೆ ವೇಳೆ ತೊಟ್ಟಿದ್ದಕ್ಕೆ ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ ಸಂತಸ ವ್ಯಕ್ತ ಪಡಿಸಿದರು. ‘ಎರಡು ತಿಂಗಳ ಹಿಂದೆ ನಾನು ಉಡುಗೊರೆಯಾಗಿ ನೀಡಿದ ಸೀರೆಯನ್ನು ಧರಿಸಿ ಸಚಿವೆ ಮಧುಬನಿ ಕಲೆಗೆ ಗೌರವ ಸಲ್ಲಿಸಿದ್ದಾರೆ. ಬಜೆಟ್ ದಿನ ಅದನ್ನು ಧರಿಸಲು ವಿನಂತಿಸಿದ್ದೆ. ಅವರು ಕೋರಿಕೆಯನ್ನು ಒಪ್ಪಿಕೊಂಡರು. ಇದು ನನಗೆ ಕನಸಿನಂತೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೀರೆ ಸಿದ್ಧಪಡಿಸಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಸಚಿವೆಗೆ ಮೊಸರು ತಿನ್ನಿಸಿದ ಮುರ್ಮು
ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಪಾರ್ಲಿಮೆಂಟ್‌ಗೆ ಆಗಮಿಸುವ ಮುನ್ನ ರಾಷ್ಟ್ರಪತಿ ಭವನಕ್ಕೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಭೇಟಿ ನೀಡಿದದರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಸಚಿವೆಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಬಜೆಟ್ ಸಿಹಿಯಾಗಲಿ ಎಂದು ಶುಭ ಹಾರೈಸಿದರು. ಇದು ಅದೃಷ್ಟ ತರುತ್ತದೆ ಎನ್ನುವ ಪ್ರತೀತಿಯಿದೆ.
ವಿಪಕ್ಷಗಳ ಗದ್ದಲ
ಬಜೆಟ್ ಮಂಡನೆ ಸಂದರ್ಭದಲ್ಲಿ ವಿಪಕ್ಷಗಳು ಸಂಸತ್‌ನಲ್ಲಿ ಗದ್ದಲ ಸೃಷ್ಟಿಸಿದರು. ಲೋಕಸಭೆ ಬಾವಿಯತ್ತ ತೆರಳಿ ಪ್ರಯಾಗ್‌ರಾಜ್‌ನ ಕುಂಭಮೇಳದ ಕಾಲ್ತುಳಿತ ದುರಂತದ ಬಗ್ಗೆ ಮಾತನಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು. ಧರ್ಮ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿ ಗದ್ದಲ ಸೃಷ್ಟಿಸಿದರು. ಸಭಾತ್ಯಾಗ ನಡೆಸಿ ಬಳಿಕ ಮತ್ತೆ ವಾಪಾಸ್ ಆದರು.
12 ಲಕ್ಷದ ತನಕ ಆದಾಯ ತೆರಿಗೆ ಪಾವತಿ ವಿನಾಯಿತಿ ಎನ್ನುವ ಘೋಷಣೆ ಹೊರ ಬೀಳುತ್ತಿದ್ದಂತೆ ವಿಪಕ್ಷ ಸ್ಥಬ್ಧವಾಯಿತು. ಪ್ರಧಾನಿ ಮೋದಿ ಮೇಜು ಬಡಿದು ಸಹಮತ ವ್ಯಕ್ತ ಪಡಿಸುತ್ತಿದ್ದಂತೆ ಪ್ರತಿಪಕ್ಷ ನಾಯಕರು ಮೋದಿ ಮೋದಿ ಎನ್ನುವ ಘೋಷಣೆ ಕೂಗುತ್ತಿದ್ದಂತೆ ವಿಪಕ್ಷದ ನಾಯಕರು ಮೌನವಾದರು.
ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಗೆ ಆಗಮಿಸುವ ಸಂದರ್ಭದಲ್ಲಿ ಭಾರತ್ ಮಾತಾ ಕೀ ಘೋಷಣೆಗಳೊಮದಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ವಿಪಕ್ಷಗಳು ಜೈ ಭೀಮ್, ಜೈ ಸಂವಿಧಾನ ಘೋಷಣೆ ಕೂಗಿದರು.
ಬಿಹಾರಕ್ಕೆ ಬಂಪರ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್‌ನಲ್ಲಿ ಬಿಹಾರಕ್ಕೆ ಭರಪೂರ ಯೋಜನೆಗಳನ್ನು ಘೋಷಿಸಿದರು. ಬಿಹಾರದಲ್ಲಿ ಮುಂಬರುವ ಚುನಾವಣೆ, ಜೆಡಿಯು ಜೊತೆಗಿನ ಮೈತ್ರಿ ಕಾರಣಕ್ಕೆ ಭರ್ಜರಿ ಘೋಷಣೆಗಳನ್ನು ನೀಡಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಬಿಹಾರದಲ್ಲಿ ಮಖಾನಾ ಮಂಡಳಿ ಸ್ಥಾಪನೆ ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಹಣಕಾಸಿನ ನೆರವು. ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ವಾಣಿಜ್ಯೋದ್ಯಮ ಮತ್ತು ನಿರ್ವಹಣೆ, ಗ್ರೀನ್ ಫೀಲ್ಡ್ ಯೋಜನೆಗಳನ್ನು ಘೋಷಿಸಿದರು.