ಸಾರಾಂಶ
ಮಹಾಕುಂಭ ನಗರ (ಉ.ಪ್ರ.) : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಡೇರೆಗಳಲ್ಲಿ ಸಿಲಿಂಡರ್ ಸ್ಫೋಟದ ಬೆನ್ನಲ್ಲೇ, ಸೋಮವಾರ ಸೆಕ್ಟರ್ 16ರ ಕಿನ್ನರ್ ಅಖಾಡ ಶಿಬಿರದಲ್ಲಿ ಕ್ಯಾಂಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
‘ಶ್ರೀ ಹರಿ ದಿವ್ಯ ಸಾಧನಾ ಪೀಠದ ಶಿಬಿರದ ಸಣ್ಣ ಟೆಂಟ್‌ಗೆ ಬೆಳಗ್ಗೆ 9.30ಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಕ್ಯಾಂಪ್ ಬಳಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟರೊಳಗೆ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಅದೃಷ್ಟವಶಾತ್‌ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಕುಂಭಮೇಳದ ಸೆಕ್ಟರ್ 19ರಲ್ಲಿ ಸಿಲಿಂಡರ್ ಸ್ಫೋಟಗೊಂಡು 100 ಟೆಂಟ್‌ಗಳು ಬೆಂಕಿಗೆ ಆಹುತಿಯಾಗಿದ್ದವು.
ಪ್ರೇಯಸಿಗಾಗಿ ಹಿಂದೂ ಧರ್ಮ ಸ್ವೀಕರಿಸಿದ ಮುಸ್ಲಿಂ ಯುವಕ!
ಬಸ್ತಿ (ಉ.ಪ್ರ):10 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುವುದಕ್ಕಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರವಾದ ಘಟನೆ ನಡೆದಿದೆ. 34 ವರ್ಷದ ಸದ್ದಾಂ ಎಂಬಾತ ಶಿವಶಂಕರ್ ಸೋನಿ ಎಂದು ಹೆಸರು ಬದಲಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ವಿವಾಹಪೂರ್ವ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಕಾರಣ ನೀಡಿ ಮೂರು ದಿನಗಳ ಹಿಂದೆ ಯುವತಿಯೊಬ್ಬಳು ಸದ್ದಾಂ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಳು. ಆದರೆ ಈಗ ಅವರಿಬ್ಬರೂ ಸ್ವ ಇಚ್ಛೆಯಿಂದಲೇ ವಿವಾಹವಾಗಿದ್ದಾರೆ’ ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಎಸ್ ಹೆಚ್ ಒ ದೇವೇಂದ್ರ ಸಿಂಗ್ ತಿಳಿಸಿದರು.
‘ನಗರ ಬಜಾರ್ ನಿವಾಸಿ ಸದ್ದಾಂ ಹುಸೇನ್ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರೂ ಬೇರೆ ಬೇರೆ ಧರ್ಮದವರಾದ್ದರಿಂದ ಸದ್ದಾಂನ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ. ಹಾಗಾಗಿ ಯುವತಿ ದೂರು ದಾಖಲಿಸಿದ್ದಳು. ಆದರೆ ನಂತರ ಪ್ರಕರಣದಲ್ಲಿ ತಿರುವು ಲಭಿಸಿದೆ. ಭಾನುವಾರ ರಾತ್ರಿ ಸಿಟಿ ಮಾರ್ಕೆಟ್ ನ ದೇವಾಲಯದಲ್ಲಿ ಅವರಿಬ್ಬರೂ ಸ್ವ ಇಚ್ಛೆಯಿಂದ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.’ ಎಂದು ಅವರು ಹೇಳಿದರು.