ಸಾರಾಂಶ
ಬಲವಂತದ ಮತಾಂತರ ಕೇಸಲ್ಲಿ ಮೊದಲ ಜೀವಾವಧಿ ಶಿಕ್ಷೆಯನ್ನು ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲಾಗಿದೆ.
ಬುಲಂದ್‌ಶಹರ್ (ಉ.ಪ್ರ): ಇಸ್ಲಾಂ ಧರ್ಮದ ಗುರುತನ್ನು ಮುಚ್ಚಿಟ್ಟು ಹಿಂದೂ ದಲಿತ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಕಾನೂನು ಬಾಹಿರ ಮತಾಂತರ ಕಾಯ್ದೆಯಡಿ ರಾಜ್ಯದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
ಅನೀಸ್ ಎಂಬಾತ ತನ್ನನ್ನು ಆಕಾಶ್ ಎಂದು ಗುರುತಿಸಿಕೊಂಡು ಹಿಂದೂ ದಲಿತ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದ. ಜೊತೆಗೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿ ಹಲವು ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದ. ನಂತರದಲ್ಲಿ ತನ್ನ ನಿಜ ಧರ್ಮ ಬಹಿರಂಗ ಮಾಡಿ ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದ. ಇಷ್ಟೆಲ್ಲಾ ಆದ ಮೇಲೆ ಆಕೆಯನ್ನು ವಂಚಿಸಿ ಪರಾರಿಯಾಗಿದ್ದ. ಈ ಕುರಿತು ಸಂತ್ರಸ್ತ ಮಹಿಳೆ ದಾಖಲಿಸಿದ್ದ ದೂರಿನ ಅನ್ವಯ ಅನೀಸ್ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆ, ಬಲವಂತ ಮತಾಂತರ ನಿಷೇಧ ಕಾಯ್ದೆ ಹಾಗೂ ಇತರೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.