ಸಾರಾಂಶ
ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಅರೆಸ್ಟ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಾಗಿದೆ. ವಂಚನೆ ನಡೆದ 8 ತಿಂಗಳಲ್ಲೇ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಲ್ಯಾಣಿ ಕೋರ್ಟ್ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೋಲ್ಕತಾ: ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಅರೆಸ್ಟ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆನ್ನು ಪ್ರಕಟಿಸಲಾಗಿದೆ. ವಂಚನೆ ನಡೆದ 8 ತಿಂಗಳಲ್ಲೇ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಲ್ಯಾಣಿ ಕೋರ್ಟ್ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಶುಕ್ರವಾರ ಈ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ.
ಈ ಬಗ್ಗೆ ವಿಶೇಷ ಸಾರ್ವಜನಿಕ ಅಭಿಯೋಜಕ ಬಿವಾಸ್ ಚಟರ್ಜಿ ಮಾತನಾಡಿ, ‘ದೇಶದಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಬಂಧನ ಅಪರಾಧ ಸಾಬೀತಾಗಿದೆ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. 2025ರ ಫೆ.24ರಂದು ಆರಂಭವಾದ ಕಸ್ಟಡಿ ವಿಚಾರಣೆ 4.5 ತಿಂಗಳೊಳಗೆ ಕೊನೆಗೊಂಡಿತು. ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇವಲ 8 ತಿಂಗಳು ಸಮಯ ಹಿಡಿಸಿತು. ಇದು ಒಂದು ಮಹತ್ವದ ಮೈಲಿಗಲ್ಲು’ ಎಂದು ಹೇಳಿದ್ದಾರೆ.
2024ರ ಅಕ್ಟೋಬರ್‌ನಲ್ಲಿ, ಮುಂಬೈ ಪೊಲೀಸ್ ಸೋಗಿನಲ್ಲಿ ವಾಟ್ಸಾಪ್ ಕರೆ ಮಾಡಿದವರಿಂದ 1 ಕೋಟಿ ರು. ವಂಚನೆಗೊಳಗಾದ ನಿವೃತ್ತ ವಿಜ್ಞಾನಿ ಪಾರ್ಥ ಕುಮಾರ್ ಮುಖರ್ಜಿ ಸಲ್ಲಿಸಿದ ದೂರಿನ ಆಧಾರದಲ್ಲಿ ವಿಚಾರಣೆ ಆರಂಭವಾಗಿತ್ತು. ತನಿಖೆಗಿಳಿದ ಪೊಲೀಸರಿಗೆ, ಈ ಕರೆಯನ್ನು ಭಾರತದ ಸಿಮ್ ಬಳಸಿ ಕಾಂಬೋಡಿಯಾದಿಂದ ಮಾಡಲಾಗಿತ್ತು ಹಾಗೂ 100ಕ್ಕೂ ಅಧಿಕರನ್ನು ವಂಚಿಸಿ 100 ಕೋಟಿ ರು.ಗೂ ಅಧಿಕ ಹಣವನ್ನು ದೋಚಲಾಗಿತ್ತು ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ 4, ಹರಿಯಾಣದ 3 ಮತ್ತು ಗುಜರಾತ್ ಇಬ್ಬರನ್ನು ಬಂಧಿಸಲಾಗಿದೆ. ಅವರಿಂದ ಹಲವು ಬ್ಯಾಂಕ್ ಪಾಸ್‌ಬುಕ್, ಎಟಿಎಂ, ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಜಿಟಲ್ ಅರೆಸ್ಟ್ ಎಂದರೇನು?:
ಪೊಲೀಸರು ಅಥವಾ ಅಧಿಕಾರಿಗಳ ಸೋಗಿನಲ್ಲಿ ಅಮಾಯಕರಿಗೆ ಕರೆ ಮಾಡಿ, ಅವರನ್ನು ಯಾವುದೋ ನಕಲಿ ಅಪರಾಧದ ವಿಚಾರಣೆಗೆ ಒಳಪಡಿಸಲಾಗುತ್ತದೆ. ಅಂತೆಯೇ, ಹಣಕ್ಕೂ ಬೇಡಿಕೆ ಇಟ್ಟು ವಂಚಿಸಲಾಗುತ್ತದೆ.
ಡಿಜಿಟಲ್ ಅರೆಸ್ಟ್ ಹಾದಿ
2024ರ ಅಕ್ಟೋಬರ್‌ನಲ್ಲಿ ಪಾರ್ಥ ಕುಮಾರ್ ಎಂಬುವವರಿಂದ ಡಿಜಿಟಲ್ ಅರೆಸ್ಟ್ ಮೂಲಕ 1 ಕೋಟಿ ವಂಚನೆ ದೂರು ಸಲ್ಲಿಕೆ
ತನಿಖೆ ವೇಳೆ ಮುಂಬೈ ಪೊಲೀಸರ ಹೆಸರಿನಲ್ಲಿ ಬಂದಿದ್ದ ಕರೆಯನ್ನು ಕಾಂಬೋಡಿಯಾದಿಂದ ಮಾಡಲಾಗಿತ್ತು ಎಂಬುದು ಬೆಳಕಿಗೆ
ಹೆಚ್ಚಿನ ವಿಚಾರಣೆ ವೇಳೆ ಇದೊಂದು ಸಂಘಟಿತ ಕೃತ್ಯ. ಇದರ ಮೂಲಕ 100 ಕೋಟಿ ರು.ಗೂ ಹೆಚ್ಚಿನ ಸುಲಿಗೆ ಮಾಡಿದ್ದು ಪತ್ತೆ
ಈ ಸಂಬಂಧ 9 ಜನರನ್ನು ಬಂಧಿಸಿದ್ದ ಪಶ್ಚಿಮ ಬಂಗಾಳದ ಪೊಲೀಸರು. 2025ರ ಫೆ.ರಿಂದ ನ್ಯಾಯಾಲಯದಲ್ಲಿ ವಿಚಾರಣೆ ಶುರು
ವಿಚಾರಣೆ ಆರಂಭವಾದ 4.5 ತಿಂಗಳಲ್ಲಿ ವಿಚಾರಣೆ ನಡೆಸಿದ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಸ್ಥಳೀಯ ನ್ಯಾಯಾಲಯ
ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲಾ 9 ಜನರಿಗೂ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್. ಡಿಜಿಟಲ್ ಅರೆಸ್ಟ್ ಕೇಸಲ್ಲಿ ಶಿಕ್ಷೆ ಇದೇ ಮೊದಲು