ಸಾರಾಂಶ
ಪಿಟಿಐ ನವದೆಹಲಿ
ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಗೆದ್ದು, 2 ರಾಜ್ಯಗಳಲ್ಲಿ ಅಚ್ಚರಿಯ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದ ಬಿಜೆಪಿ, 3ನೇ ರಾಜ್ಯದಲ್ಲೂ ಹೊಸ ಮುಖಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿ ಎಲ್ಲರನ್ನೂ ನಿಬ್ಬೆರಗು ಮಾಡಿದೆ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಬಿವಿಪಿ ಮೂಲದ ಹಾಗೂ ಆರೆಸ್ಸೆಸ್ ಬೆಂಬಲಿತ ಭಜನ್‌ಲಾಲ್ ಶರ್ಮಾ ಅವರನ್ನು ರಾಜಸ್ಥಾನದ ಸಿಎಂ ಆಗಿ ಮಂಗಳವಾರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಇದೇ ವೇಳೆ ಮುಖ್ಯಮಂತ್ರಿ ರೇಸ್‌ನಲ್ಲಿದ್ದ ರಾಜವಂಶಸ್ಥೆ ದಿಯಾ ಕುಮಾರಿ ಅವರನ್ನು ಹಾಗೂ ದಲಿತ ಮುಖಂಡ ಪ್ರೇಮಚಂದ ಬೈರ್ವಾ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಲಾಗಿದೆ. ವಾಸುದೇವ ದೇವ್ನಾನಿ ಅವರನ್ನು ವಿಧಾನಸಭೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಡಿ.15ರಂದು ಶರ್ಮಾ ಹಾಗೂ ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಇದರೊಂದಿಗೆ ಮಾಜಿ ಕೇಂದ್ರ ಸಚಿವೆ ಮತ್ತು ಎರಡು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ, ರಾಜಮನೆತನಕ್ಕೆ ಸೇರಿದ ವಸುಂಧರಾ ರಾಜೇ ಅವರ ರಾಜ್ಯ ರಾಜಕೀಯಕ್ಕೆ ತೆರೆ ಬಿದ್ದಿದೆ ಎಂದು ವಿಶ್ಲೇಷಿಸಲಾಗಿದೆ.ಬ್ರಾಹ್ಮಣ-ರಜಪೂತ-ದಲಿತ ಸಮೀಕರಣ:ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾರನ್ನು ಸಿಎಂ ಮಾಡಬಹುದು ಎಂಬ ಕುತೂಹಲವಿತ್ತು. ಸಿಎಂ ರೇಸಲ್ಲಿ ಘಟಾನುಘಟಿಗಳಾದ ವಸುಂಧರಾ ರಾಜೇ, ಸಿ.ಪಿ.ಜೋಶಿ, ಕಿರೋಡಿಲಾಲ್ ಮೀನಾ, ಗಜೇಂದ್ರ ಸಿಂಗ್ ಶೆಖಾವತ್, ದಿಯಾ ಕುಮಾರಿ- ಮೊದಲಾದವರಿದ್ದರು.ಈ ನಡುವೆ, ರಾಜನಾಥ ಸಿಂಗ್ ನೇತೃತ್ವದ ಮೂವರು ಕೇಂದ್ರೀಯ ವೀಕ್ಷಕರು ಹಾಗೂ ಪಕ್ಷದ ಚುನಾವಣಾ ಪ್ರಭಾರಿಯಾದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಭಜನ್‌ಲಾಲ್ ಶರ್ಮಾ ಅವರನ್ನು ಮುಖ್ಯಮಂತ್ರಿ ಎಂದು ಆಯ್ಕೆ ಮಾಡಲಾಯಿತು. ಇತರ ಎಲ್ಲ ಸಿಎಂ ಸ್ಥಾನಾಕಾಂಕ್ಷಿಗಳನ್ನು ಬದಿಗೆ ಸರಿಸಲಾಯಿತು.
56ರ ಹರೆಯದ ಶರ್ಮಾ ಬ್ರಾಹ್ಮಣ ಸಮುದಾಯದವರು. ಇದೇ ವೇಳೆ ಜಾತಿ ಸಮತೋಲನಕ್ಕಾಗಿ ರಜಪೂತ ಸಮುದಾಯದ ದಿಯಾ ಕುಮಾರಿ ಅವರನ್ನು ಹಾಗೂ ದಲಿತ ಬೈರ್ವಾ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಲಾಯಿತು. ಸ್ಪೀಕರ್ ದೇವ್ನಾನಿ ಸಿಂಧಿ ಸಮುದಾಯದವರು.ಆದರೆ ರಾಜ್ಯದ ಪ್ರಭಾವಿ ಜಾಟ್ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ.
---3 ಘಟಾನುಘಟಿ ಮಾಜಿ
ಸಿಎಂಗಳು ನೇಪಥ್ಯಕ್ಕೆನವದೆಹಲಿ: ಛತ್ತೀಸ್‌ಗಢ ಹಾಗೂ ಮಧ್ಯಪ್ರದೇಶದಲ್ಲೂ ಬಿಜೆಪಿ ವರಿಷ್ಠರು ರೇಸ್‌ನಲ್ಲೇ ಇಲ್ಲದವರನ್ನು ಮುಖ್ಯಮಂತ್ರಿ ಎಂದು ಕಳೆದೆರಡು ದಿನಗಳಲ್ಲಿ ಘೋಷಿಸಿದ್ದರು. ರಾಜಸ್ಥಾನದಲ್ಲೂ ಅದು ಪುನರಾವರ್ತನೆ ಆಗಿದೆ. ಇದರಿಂದಾಗಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ.ಅಡ್ವಾಣಿ ಅವರ ಕಾಲದಿಂದ ಈ ಮೂರೂ ರಾಜ್ಯಗಳ ಚುಕ್ಕಾಣಿ ಹಿಡಿದಿದ್ದ ರಮಣ್ ಸಿಂಗ್ (ಛತ್ತೀಸ್‌ಗಢ), ಶಿವರಾಜ ಸಿಂಗ್ ಚೌಹಾಣ್ (ಮಧ್ಯಪ್ರದೇಶ) ಹಾಗೂ ವಸುಂಧರಾ ರಾಜೇ (ರಾಜಸ್ಥಾನ) ನೇಪಥ್ಯಕ್ಕೆ ಸರಿದಂತಾಗಿದೆ.
==ಮೂರೂ ರಾಜ್ಯದಲ್ಲಿ 2ಡಿಸಿಎಂ: ಹೊಸ ನಡೆಬಿಜೆಪಿ ಜಯಗಳಿಸಿದ 3 ರಾಜ್ಯಗಳಲ್ಲೂ ಹೊಸಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಛತ್ತೀಸ್‌ಗಢದಲ್ಲಿ ವಿಷ್ಣುದೇವ ಸಾಯ್, ಮಧ್ಯಪ್ರದೇಶದಲ್ಲಿ ಮೋಹನ್ ಯಾದವ್ ಮತ್ತು ರಾಜಸ್ಥಾನದಲ್ಲಿ ಭಜನ್‌ಲಾಲ್ ಶರ್ಮಾ ಅವರನ್ನು ಸಿಎಂ ಮಾಡಲಾಗಿದೆ. ಇದೇ ವೇಳೆ ಜಾತಿ ಸಮೀಕರಣದ ಕಾರಣಕ್ಕಾಗಿ ಮೂರೂ ರಾಜ್ಯಗಳಲ್ಲಿ ತಲಾ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಛತ್ತೀಸ್‌ಗಢದಲ್ಲಿ ಅರುಣ್ ಸಾವೋ, ವಿಜಯ್ ಶರ್ಮ, ಮಧ್ಯಪ್ರದೇಶದಲ್ಲಿ ರಾಜೇಂದ್ರ ಶುಕ್ಲಾ, ಜಗದೀಶ್ ದೇವ್ಡಾ ಮತ್ತು ರಾಜಸ್ಥಾನದಲ್ಲಿ ದಿಯಾ ಕುಮಾರಿ ಮತ್ತು ಪ್ರೇಮ್‌ಚಂದ್ ಬೈರ್ವಾ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ.