ಸಂಸತ್‌ ಅಧಿವೇಶನಕ್ಕೆ ಮುನ್ನ ವಿದೇಶಿ ಅಡ್ಡಿ ಎದುರಾಗದ್ದು 10 ವರ್ಷದಲ್ಲಿ ಮೊದಲು : ಮೋದಿ

| N/A | Published : Feb 01 2025, 12:03 AM IST / Updated: Feb 01 2025, 05:11 AM IST

ಸಾರಾಂಶ

‘ಪ್ರತೀ ಬಾರಿ ಸಂಸತ್‌ ಅಧಿವೇಶನಕ್ಕೂ ಮುನ್ನ ಭಾರತದಲ್ಲಿ ತಲ್ಲಣ ಸೃಷ್ಟಿಸುವಂತಹ ಕೆಲಸ ಮಾಡಲು ವಿದೇಶದಲ್ಲಿ ಯಾರಾದರೂ ತಯಾರಿರುತ್ತಿದ್ದರು. ಆದರೆ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತಹ ಪ್ರಯತ್ನಗಳು ನಡೆದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ‘ಪ್ರತೀ ಬಾರಿ ಸಂಸತ್‌ ಅಧಿವೇಶನಕ್ಕೂ ಮುನ್ನ ಭಾರತದಲ್ಲಿ ತಲ್ಲಣ ಸೃಷ್ಟಿಸುವಂತಹ ಕೆಲಸ ಮಾಡಲು ವಿದೇಶದಲ್ಲಿ ಯಾರಾದರೂ ತಯಾರಿರುತ್ತಿದ್ದರು. ಆದರೆ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂತಹ ಪ್ರಯತ್ನಗಳು ನಡೆದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಜೆಟ್‌ ಅಧಿವೇಶನಕ್ಕೂ ಮುನ್ನ ಮಾತನಾಡಿದ ಮೋದಿ, ‘2014ರಿಂದ ಮೊದಲ ಬಾರಿ, ಅಧಿವೇಶನಕ್ಕೂ ಒಂದೆರಡು ದಿನದ ಹಿಂದೆ ವಿದೇಶದಲ್ಲಿ ಕಿಡಿ ಹತ್ತಿ, ಭಾರತದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆದಿಲ್ಲ’ ಎನ್ನುವ ಮೂಲಕ ಪರೋಕ್ಷವಾಗಿ ವಿಪಕ್ಷ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಸಂಸತ್‌ ಅಧಿವೇಶನಕ್ಕೂ ಮುನ್ನ ವಿದೇಶಿ ಸಂಸ್ಥೆಗಳು ಭಾರತ, ಭಾರತೀಯರ ವಿರುದ್ಧ, ಭಾರತ ಸರ್ಕಾರದ ವಿರುದ್ಧ ವರದಿಗಳನ್ನು ಪ್ರಕಟಿಸುತ್ತಿದ್ದವು. ಅದು ಭಾರೀ ಗದ್ದಲಕ್ಕೆ ಕಾರಣವಾಗಿ ಇಡೀ ಅಧಿವೇಶನವನ್ನೇ ಬಲಿ ಪಡೆಯುತ್ತಿತ್ತು. ಇದರ ಜೊತೆಗೆ ಕಳೆದ ವರ್ಷ ರಾಹುಲ್‌ ಗಾಂಧಿ ತಮ್ಮ ಲಂಡನ್‌ ಭೇಟಿ ವೇಳೆ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದ ಸುದ್ದಿ ಕೂಡಾ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಹಿಂಡನ್‌ಬರ್ಗ್‌ ವರದಿ ಕೂಡಾ ಇಂಥದ್ದೇ ಗದ್ದಲಕ್ಕೆ ಕಾರಣವಾಗಿತ್ತು.

ಪ್ರಧಾನಿಯವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಂಸದೆ ಪ್ರಿಯಾಂಕಾ ಗಾಂಧಿ, ‘ಅವರು (ಮೋದಿ) ಎಂದೂ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ, ಅವುಗಳನ್ನು ಬಗೆಹರಿಸುವುದಿಲ್ಲ. ಕಳೆದ ಬಾರಿಯ ಅಧಿವೇಶನದಲ್ಲೂ ಚರ್ಚೆಗೆ ಅನುವು ಮಾಡಿಕೊಡಲಿಲ್ಲ’ ಎಂದು ಆರೋಪಿಸಿದ್ದಾರೆ.