ಸಾರಾಂಶ
ಕಥುವಾ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಸೋಮವಾರ ಉಗ್ರರು ನಡೆಸಿದ ಗ್ರೆನೇಡ್ ಹಾಗೂ ಗುಂಡಿನ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಐವರು ಯೋಧರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಕೇಂದ್ರದಿಂದ 150 ಕಿಲೋಮೀಟರ್ ದೂರದಲ್ಲಿರುವ ಬದ್ನೋಟಾದಲ್ಲಿ ಯೋಧರು ಮಧ್ಯಾಹ್ನ 3.30ರ ವೇಳೆ ಪಹರೆ ನಡೆಸುತ್ತಿದ್ದ ವೇಳೆ ಉಗ್ರರು ಏಕಾಏಕಿ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಯೋಧರು ಕೂಡಾ ಪ್ರತಿದಾಳಿ ನಡೆಸಿದರಾದರೂ, ಈ ವೇಳೆಗೆ ಉಗ್ರರು ದಟ್ಟ ಅರಣ್ಯದಲ್ಲಿ ಪರಾರಿಯಾಗಿದ್ದಾರೆ.
ಉಗ್ರರ ಪತ್ತೆಗಾಗಿ ಇಡೀ ಪ್ರದೇಶವನ್ನು ಸುತ್ತುವರೆಯಲಾಗಿದೆ. ಸ್ಥಳಕ್ಕೆ ಹೆಚ್ಚಿನ ಯೋಧರನ್ನು ರವಾನಿಸಲಾಗಿದೆ. ಈಗಲೂ ಘಟನಾ ಸ್ಥಳದಲ್ಲಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
ಇದು ಕಳೆದ 1 ತಿಂಗಳಲ್ಲಿ ಕಥುವಾ ಜಿಲ್ಲೆಯಲ್ಲೇ ನಡೆದ 2ನೇ ಉಗ್ರ ದಾಳಿಯಾಗಿದೆ. ಜೂ.12/13ರಂದು ಕೂಡಾ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಯೋಧರು ನಡೆಸಿದ ಪ್ರತಿ ದಾಳಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರೆ, ಓರ್ವ ಯೋಧ ಹುತಾತ್ಮನಾಗಿದ್ದ.