ಸಾರಾಂಶ
ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಬಲಿಯಾಗಿರುವ ಕನ್ನಡಿಗರ ಪಾರ್ಥಿವ ಶರೀರ ಬುಧವಾರ ತಡರಾತ್ರಿ ರಾಜ್ಯಕ್ಕೆ .
ಬೆಂಗಳೂರು : ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಬಲಿಯಾಗಿರುವ ಕನ್ನಡಿಗರ ಪಾರ್ಥಿವ ಶರೀರ ಬುಧವಾರ ತಡರಾತ್ರಿ ರಾಜ್ಯಕ್ಕೆ . ಇನ್ನು ದಾಳಿಯಿಂದ ಸಂತ್ರಸ್ತರಾಗಿರುವ ಕನ್ನಡಿಗರ ಪೈಕಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂಪರ್ಕಕ್ಕೆ ಬಂದಿರುವ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ಗುರುವಾರ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕನ್ನಡಿಗರ ರಕ್ಷಣೆಗಾಗಿ ಕಾಶ್ಮೀರದ ಪಹಲ್ಗಾಂಗೆ ತೆರಳಿರುವ ಸಚಿವ ಸಂತೋಷ್ ಲಾಡ್ ಅವರೇ ಈ ಮಾಹಿತಿ ನೀಡಿದ್ದು, ದಾಳಿಯಲ್ಲಿ ಮೃತಪಟ್ಟಿರುವ ಕನ್ನಡಿಗರ ಮೃತದೇಹಗಳನ್ನು ಹೊತ್ತು ತರುತ್ತಿರುವ ವಿಮಾನ ಬುಧವಾರ ತಡರಾತ್ರಿ ವೇಳೆಗೆ ಬೆಂಗಳೂರು ತಲುಪುವ ಸಾಧ್ಯತೆ ಇದೆ. ಮಾಹಿತಿ ಪ್ರಕಾರ, ದಾಳಿಯಲ್ಲಿ ಮೃತಪಟ್ಟಿರುವ ರಾಜ್ಯದ ಮಂಜುನಾಥ್, ಭರತ್ ಭೂಷಣ್ ಹಾಗೂ ಆಂಧ್ರಪ್ರದೇಶ ಮೂಲದ ಬೆಂಗಳೂರು ನಿವಾಸಿ ಮಧುಸೂದನರಾವ್ ಅವರ ಮೃತದೇಹಗಳನ್ನು ವಿಮಾನದಲ್ಲಿ ತರಲಾಗುತ್ತಿದೆ.
ದಾಳಿಯಿಂದ ಕಾಶ್ಮೀರದ ವಿವಿಧೆಡೆ ಉಳಿದಿರುವ ಸುಮಾರು 150 ಕನ್ನಡಿಗರು ನಮ್ಮ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರನ್ನೂ ಗುರುವಾರ ರಾಜ್ಯಕ್ಕೆ ಒಂದೇ ವಿಮಾನದಲ್ಲಿ ಕರೆತರಲಾಗುವುದು. ಬೆಳಗ್ಗೆ 10.30 ಸುಮಾರಿಗೆ ಈ ವಿಮಾನ ಕಾಶ್ಮೀರದಿಂದ ಹೊರಡಲಿದೆ ಎಂದು ಸಂತೋಷ್ ಲಾಡ್ ''ಕನ್ನಡಪ್ರಭ''ಕ್ಕೆ ತಿಳಿಸಿದರು.
ಲಭ್ಯ ಮಾಹಿತಿ ಪ್ರಕಾರ ಸಚಿವ ಸಂತೋಷ್ ಲಾಡ್ ಸಹಕಾರದಿಂದ ಒಂದೇ ವಿಮಾನದಲ್ಲಿ ಎಲ್ಲ 150ಕ್ಕೂ ಹೆಚ್ಚು ಕನ್ನಡಿಗರು ರಾಜಧಾನಿ ತಲುಪಲಿದ್ದಾರೆ. ಬುಧವಾರ ಇಡೀ ದಿನ ಕಾಶ್ಮೀರದ ವಿವಿಧ ಹೋಟೆಲ್‌ನಲ್ಲಿ ಉಳಿದಿರುವ ಕನ್ನಡಿಗರನ್ನು ಸಂಪರ್ಕಿಸಿ ಒಟ್ಟುಗೂಡಿಸಿರುವ ಸಚಿವರ ನಿಯೋಗ ರಾತ್ರಿಯೂ ತನ್ನ ಕೆಲಸ ಮುಂದುವರೆಸಿದೆ. ಬೆಳಗಿನ ವೇಳೆಗೆ ಇನ್ನಷ್ಟು ಮಂದಿ ಸಂಪರ್ಕಕ್ಕೆ ಬರುವ ಸಾಧ್ಯತೆ ಇದ್ದು, ರಾಜ್ಯಕ್ಕೆ ಮರಳುವ ಕನ್ನಡಿಗರ ಸಂಖ್ಯೆ 160 ಮೀರಬಹುದು ಎನ್ನಲಾಗಿದೆ.