ಸಾರಾಂಶ
ಮೆಕ್ಕಾ: ಸೌದಿ ಅರೇಬಿಯಾದ ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮೆಕ್ಕಾ ಮತ್ತು ಮದೀನಾದಲ್ಲಿ ಸೋಮವಾರ ಅಕಾಲಿಕ ಮಳೆ ಸುರಿದ ಪರಿಣಾಮ ಪ್ರವಾಹದ ವಾತಾವರಣ ಸೃಷ್ಟಿಯಾಗಿ ಭಕ್ತರು ಪರದಾಡಿದ್ದಾರೆ.
ಮಳೆ ಕೇವಲ 5 ಸೆಂ.ಮೀ. ಆಗಿದ್ದರೂ ಅಕಾಲಿಕ ಮಳೆ ಕಾರಣ ಪ್ರವಾಹ ಸೃಷ್ಟಿಯಾಗಿದೆ.ಅನೇಕ ಪ್ರದೇಶಗಳಲ್ಲಿ ಭಾರೀ ಮಳೆ ಜತೆಗೆ ಆಲಿಕಲ್ಲು ಕೂಡ ಬಿದ್ದಿವೆ. ಏಕಾಏಕಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಕ್ಕೇರಿ ಕಾರುಗಳು ನೀರಿನಲ್ಲಿ ತೇಲಿ ಹೋಗುವ ವಿಡಿಯೋಗಳು ವೈರಲ್ ಆಗಿವೆ. ಅನೇಕ ಪ್ರದೇಶಗಳು ಜಲಾವೃತ ಆಗಿವೆ.
ಬದ್ರ್ ಗವರ್ನರೇಟ್‌ನಲ್ಲಿರುವ ಅಲ್-ಶಫಿಯಾದಲ್ಲಿ 5 ಸೆಂ.ಮೀ.ನಷ್ಟು ಗರಿಷ್ಠ ಮಳೆ ದಾಖಲಾಗಿದೆ, ನಂತರ ಜೆಡ್ಡಾದಲ್ಲಿ ಅಲ್-ಬಸತೀನ್ 4 ಸೆಂ.ಮೀ., ಮದೀನಾದ ಪ್ರವಾದಿ ಮಸೀದಿ ಇರುವ ಸೆಂಟ್ರಲ್ ಹರಮ್ ಪ್ರದೇಶದಲ್ಲಿ 3.6 ಸೆಂಮೀ ಮತ್ತು ಕುಬಾ ಮಸೀದಿ ಬಳಿ 2.8 ಸೆಂಮೀ ಮಳೆಯಾಗಿದೆ.ಸೌದಿ ಅರೇಬಿಯಾದ ಹವಾಮಾನ ಇಲಾಖೆಯು ಮೆಕ್ಕಾ, ಮದೀನಾ ಮತ್ತು ಬಂದರು ನಗರ ಜೆಡ್ಡಾಕ್ಕೆ ರೆಡ್ ಅಲರ್ಟ್ ನೀಡಿದೆ. ಏರ್‌ಪೋರ್ಟಲ್ಲೂ ಕಟ್ಟೆಚ್ಚರ ಸಾರಲಾಗಿದೆ. ಈ ನಗರಗಳು ಪ್ರವಾಹಕ್ಕೆ ಕುಖ್ಯಾತಿ ಪಡೆದಿದ್ದು, 2009 ರಲ್ಲಿ 100 ಕ್ಕೂ ಹೆಚ್ಚು ಜನರು ಇಲ್ಲಿ ಸಾವನ್ನಪ್ಪಿದ್ದರು.
ಮಳೆ ಕಮ್ಮಿ ಆದರೂ ಪ್ರವಾಹಕ್ಕೆ ಕಾರಣವೇನು?
ಈ ನಗರಗಳಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಬೀಳುವ ಕಾರಣ ಮಳೆನೀರು ಚರಂಡಿಗಳ ಬಗ್ಗೆ ಸರ್ಕಾರಗಳು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಅಲ್ಪ ಮಳೆ ಬಿದ್ದರೂ ನೀರು ಸರಿಯಾಗಿ ಹರಿದು ಹೋಗದೇ ಪ್ರವಾಹ ಸೃಷ್ಟಿ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ.