ಹಿಮಾಚಲದ ಕುಲುನಲ್ಲಿ ಮೇಘಸ್ಫೋಟ: ಹಠಾತ್‌ ಪ್ರವಾಹ ಸೃಷ್ಟಿ

| Published : Jul 31 2024, 01:10 AM IST

ಹಿಮಾಚಲದ ಕುಲುನಲ್ಲಿ ಮೇಘಸ್ಫೋಟ: ಹಠಾತ್‌ ಪ್ರವಾಹ ಸೃಷ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಮಂಗಳವಾರ ಉಂಟಾದ ಮೇಘಸ್ಫೋಟದಿಂದ ಹಠಾತ್‌ ಪ್ರವಾಹ ಸೃಷ್ಟಿಯಾಗಿದೆ.

ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಮಂಗಳವಾರ ಉಂಟಾದ ಮೇಘಸ್ಫೋಟದಿಂದ ಹಠಾತ್‌ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಕಾಲು ಸೇತುವೆ, ಮೂರು ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್‌ಗಳು ಸೇರಿದಂತೆ ಒಂದು ಮದ್ಯದಂಗಡಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.

ಮಣಿಕರನ್‌ನ ತೋಷ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ತಂಡವನ್ನು ಘಟನಾಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜು.31, ಮತ್ತು ಆ.1 ರಂದು ರಾಜ್ಯದ ಏಳು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಸ್ಥಳೀಯ ಹವಾಮಾನ ಕಚೇರಿ ಆರೆಂಜ್ ಅಲರ್ಟ್ ಘೋಷಿಸಿದೆ.

==

ವಯನಾಡಿಗೆ ಇಂದು ರಾಹುಲ್, ಪ್ರಿಯಾಂಕಾ ಭೇಟಿನವದೆಹಲಿ: ಭೂಕುಸಿತ ದುರಂತ ಸಂಭವಿಸಿರುವ ಕೇರಳದ ವಯನಾಡಿಗೆ ಬುಧವಾರ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡ್ ಲೋಕಸಭಾ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಲಿದ್ದಾರೆ. ವಯನಾಡ್‌ಗೆ ಹೋಗುವ ಮುನ್ನ ಅವರು ವಿಮಾನದಲ್ಲಿ ಮೈಸೂರಿಗೆ ಆಗಮಿಸಲಿದ್ದು, ಅಲ್ಲಿಂದ ಅವರು ವಯನಾಡಿಗೆ ತೆರಳಲಿದ್ದಾರೆ ಹಾಗೂ ವಯನಾಡಿನ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳನ್ನು ಸಂತೈಸಲಿದ್ದಾರೆ.

ವಯನಾಡ್‌ನ ಸಂಸದರಾಗಿದ್ದ ರಾಹುಲ್ ಗಾಂಧಿ ರಾಯ್‌ಬರೇಲಿಯಿಂದಲೂ ಆಯ್ಕೆ ಆದ ಕಾರಣ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾದ ಕ್ಷೇತ್ರದ ಉಪಚುನಾವಣೆಗೆ ಸೋದರಿ ಪ್ರಿಯಾಂಕಾ ಸ್ಪರ್ಧೆ ನಿರ್ಧಾರವಾಗಿದೆಈ ನಡುವೆ ರಾಹುಲ್‌ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ‘ಕೇಂದ್ರ ಸಚಿವರ ಜೊತೆಯೂ ಚರ್ಚಿಸಿ, ವಯನಾಡಿಗೆ ಅಗತ್ಯವಿರುವ ಎಲ್ಲ ನೆರವುಗಳನ್ನು ನೀಡುವಂತೆ ಕೇಳಿದ್ದೇನೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

==

ಮಣಿಪುರದಲ್ಲೂ ಭೂಕುಸಿತ: ತಾಯಿ, ಮಗು ಸಾವು

ಇಂಫಾಲ: ಕೇರಳದಲ್ಲಿ ಭಾರಿ ಭೂಕುಸಿತದ ಬೆನ್ನಲ್ಲೇ ಮಣಿಪುರದಲ್ಲೂ ಭೂಕುಸಿತ ಸಂಭವಿಸಿದೆ. ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ತಾಯಿ ಮತ್ತು ಮಗು ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ಇದೇ ದುರಂತದಲ್ಲಿ ಪೊಲೀಸ್‌ ಪೇದೆಯ ಮನೆಯೊಂದು ಕೊಚ್ಚಿಹೋಗಿದ್ದು, ಪೇದೆ ಗಾಯಗೊಂಡಿದ್ದಾರೆ. ಅವರನ್ನು ಇಂಫಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಣಿಪುರದ ಹಲವು ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

==

ಭಾರೀ ಮಳೆಯಿಂದ ಕೊಯಮತ್ತೂರಿನಲ್ಲಿ ಭೂಕುಸಿತ: 3 ಸಾವು

ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಭಾರೀ ಮಳೆಯಿಂದಾಗಿ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಕೊಯಮತ್ತೂರು ಜಿಲ್ಲೆಯ ವಾಲ್ಪರೈ ಮತ್ತು ಪೊಲ್ಲಚಿಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ವಾಲ್ಪರೈನಲ್ಲಿ 51 ವರ್ಷದ ಮಹಿಳೆ ಹಾಗೂ ಆಕೆಯ ಮೊಮ್ಮಗಳು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಮನೆ ಸಮೀಪದ ಭೂಮಿ ಕುಸಿದು, ಮಣ್ಣಿನಡಿ ಸಿಲುಕಿ ಇಬ್ಬರೂ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಪೊಲ್ಲಚಿಯಲ್ಲಿ ಮನೆಯ ಮಣ್ಣಿನ ಗೋಡೆ ಕುಸಿದು ಯುವಕನೊಬ್ಬ ಸಾವನ್ನಪ್ಪಿದ್ದಾನೆ.ಈ ದುರಂತಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 3 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.