ಮೋದಿ ಪದಗ್ರಹಣಕ್ಕೆ 7 ವಿದೇಶಿ ಗಣ್ಯರು ದೌಡು

| Published : Jun 09 2024, 01:31 AM IST / Updated: Jun 09 2024, 04:27 AM IST

ಸಾರಾಂಶ

ಭಾರತದ ಜತೆ ಜಗಳ ಆಡಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಕೂಡ ಭಾಗಿಯಾಗುತ್ತಿದ್ದು, ಮೋದಿ ಪದಗ್ರಹಣದಲ್ಲಿ ಪಾಲ್ಗೊಳ್ಳುವುದೇ ಗೌರವ ಎಂಬುದಾಗಿ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ತಿಳಿಸಿದ್ದಾರೆ. ಇದರ ಜೊತೆಗೆ ಬಹುತೇಕ ನೆರೆ ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗುತ್ತಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಮೂರನೇ ಬಾರಿ ಪದಗ್ರಹಣ ಮಾಡುವ ಸಮಾರಂಭಕ್ಕೆ ಭಾರತದ ಜತೆ ಸಂಘರ್ಷಕ್ಕೆ ಇಳಿದಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಸೇರಿ 7 ನರೆ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಭಾನುವಾರ ಸಂಜೆ 7:15ಕ್ಕೆ ಪ್ರಮಾಣ ಸ್ವೀಕರಿಸಲಿದ್ದು, ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ, ನೇಪಾಳ ಪ್ರಧಾನಿ ಪ್ರಚಂಡ, ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ, ಭೂತಾನ್‌ ಮುಖ್ಯಸ್ಥ ಷೇರಿಂಗ್‌ ತಾಬ್ಗೆ, ಮಾರಿಷಸ್‌ ಅಧ್ಯಕ್ಷ ಪರ್ವಿಂದ್‌ ಕುಮಾರ್‌ ಜುಗ್ಗನಾಥ್‌, ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜು ಹಾಗೂ ಸೀಷೆಲ್ಸ್‌ ಉಪಾಧ್ಯಕ್ಷ ಅಹ್ಮದ್‌ ಅಫೀಫ್‌ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಭಾರತದ ನೆರೆ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀತಿಗೆ ಬೆಂಬಲ ಸೂಚಿಸಿದ್ದಾರೆ.

ಮೋದಿ ಮತ್ತು ಸಚಿವ ಸಂಪುಟ ಸದಸ್ಯರ ಪ್ರಮಾಣವಚನದ ಬಳಿಕ ವಿದೇಶಿ ಗಣ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ಧಾರೆ.

ಪಾಲ್ಗೊಳ್ಳಲು ಉತ್ಸುಕ-ಮುಯಿಜು:

ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುತ್ತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಜು ಸಹ ಪ್ರಧಾನಿ ಮೋದಿಯ ಪದಗ್ರಹಣ ಸಮಾರಂಭಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ರಾಯಭಾರಿ ನೀಡಿದ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿ ‘ಭಾರತದೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದ್ದು, ಪ್ರಧಾನಿ ಮೋದಿಯ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ. ಮೋದಿ ಪದಗ್ರಹಣದಲ್ಲಿ ಪಾಲ್ಗೊಳ್ಳುವುದೇ ಗೌರವ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮೊದಲು ಮೋದಿಯನ್ನು ಗೆಲುವಿಗೆ ಅಭಿನಂದಿಸಿ ಮುಯಿಜು ಟ್ವೀಟ್‌ ಮಾಡಿದ್ದರು. ಇದು ಮುಯಿಜು ಅವರ ಮೊದಲನೇ ಭಾರತ ಭೇಟಿಯಾಗಿದೆ.