ವಿದೇಶಿ ಬಂಡವಾಳ ಹೂಡಿಕೆ: ದೇಶದಲ್ಲೇ ಕರ್ನಾಟಕ ನಂ.2 - ಮೊದಲ ತ್ರೈಮಾಸಿಕ ಅವಧಿ: ಮಹಾರಾಷ್ಟ್ರ ಪ್ರಥಮ

| Published : Sep 07 2024, 07:48 AM IST

Janata Curfew Vidhansoudha
ವಿದೇಶಿ ಬಂಡವಾಳ ಹೂಡಿಕೆ: ದೇಶದಲ್ಲೇ ಕರ್ನಾಟಕ ನಂ.2 - ಮೊದಲ ತ್ರೈಮಾಸಿಕ ಅವಧಿ: ಮಹಾರಾಷ್ಟ್ರ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 70,795 ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. 19059 ಕೋಟಿ ರು. ಹೂಡಿಕೆಯೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ

ನಾಗಪುರ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 70,795 ಕೋಟಿ ರು. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದೆ. 19059 ಕೋಟಿ ರು. ಹೂಡಿಕೆಯೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಕೈಗಾರಿಕೆ ಹಾಗೂ ದೇಶೀಯ ವ್ಯಾಪಾರ ಉತ್ತೇಜನಾ ಇಲಾಖೆಯು ಅಂಕಿ-ಅಂಶ ಬಿಡುಗಡೆ ಮಾಡಿದೆ.

ಕರ್ನಾಟಕ 2ನೇ ಸ್ಥಾನದಲ್ಲಿದ್ದರೂ, ಪ್ರಥಮ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಆಗಿರುವ ಹೂಡಿಕೆಯನ್ನು ಗಮನಿಸಿದರೆ 3 ಪಟ್ಟುಗೂ ಕಡಿಮೆ ಹೂಡಿಕೆ ಕರ್ನಾಟಕದಲ್ಲಿ ಆಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶಕ್ಕೆ ಬಂದಿರುವ ಒಟ್ಟಾರೆ ಎಫ್‌ಡಿಐ ಪೈಕಿ ಶೇ.52ರಷ್ಟು ಮಹಾರಾಷ್ಟ್ರಕ್ಕೇ ಹೋಗಿದೆ!

ಉಳಿದಂತೆ 10788 ಕೋಟಿ ರು.ಗಳೊಂದಿಗೆ ದೆಹಲಿ 3ನೇ ಸ್ಥಾನದಲ್ಲಿದೆ. 9023 ಕೋಟಿ ರು.ಗಳೊಂದಿಗೆ ತೆಲಂಗಾಣ, 8508 ಕೋಟಿ ರು. ಹೂಡಿಕೆಯೊಂದಿಗೆ ಗುಜರಾತ್‌ ಕ್ರಮವಾಗಿ 4 ಹಾಗೂ 5ನೇ ಸ್ಥಾನವನ್ನು ಪಡೆದಿವೆ. ಈ ವರ್ಷದ ಏಪ್ರಿಲ್‌- ಜೂನ್‌ ಅವಧಿಯಲ್ಲಿ ಆಗಿರುವ ಹೂಡಿಕೆ ಇದಾಗಿದೆ.

ವಿದೇಶಿ ಹೂಡಿಕೆಯಲ್ಲಿ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದಲ್ಲಿ 1,34,959 ಕೋಟಿ ರು. ಹೂಡಿಕೆ ಆಗಿದ್ದರೆ, ಆ ಪೈಕಿ ಮಹಾರಾಷ್ಟ್ರಕ್ಕೇ 70,795 ಕೋಟಿ ರು. ಹರಿದುಬಂದಿದೆ. ತನ್ಮೂಲಕ ಒಟ್ಟಾರೆ ಹೂಡಿಕೆಯಲ್ಲಿ ಮಹಾರಾಷ್ಟ್ರದಲ್ಲೇ ಶೇ.52.46ರಷ್ಟು ಆಗಿದೆ ಎಂದಿದ್ದಾರೆ.