ಮಾಜಿ ಮುಖ್ಯಮಂತ್ರಿ ಜಗನ್‌ ವಿರುದ್ಧ ಕೊಲೆ ಯತ್ನ ಕೇಸು

| Published : Jul 13 2024, 01:41 AM IST / Updated: Jul 13 2024, 06:50 AM IST

ಮಾಜಿ ಮುಖ್ಯಮಂತ್ರಿ ಜಗನ್‌ ವಿರುದ್ಧ ಕೊಲೆ ಯತ್ನ ಕೇಸು
Share this Article
  • FB
  • TW
  • Linkdin
  • Email

ಸಾರಾಂಶ

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಚಂದ್ರಬಾಬು ನಾಯ್ಡು ಸರ್ಕಾರ ಪ್ರಹಾರ ಮುಂದುವರಿಸಿದೆ.

ವಿಜಯವಾಡ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಚಂದ್ರಬಾಬು ನಾಯ್ಡು ಸರ್ಕಾರ ಪ್ರಹಾರ ಮುಂದುವರಿಸಿದೆ. ರೆಡ್ಡಿ ಮತ್ತು ಇತರ ನಾಲ್ವರ ವಿರುದ್ಧ ಗುಂಟೂರು ಜಿಲ್ಲೆಯ ನಗರಂಪಲೆಂ ಪೊಲೀಸರು ಶುಕ್ರವಾರ ಹಳೆಯ ಘಟನೆಯೊಂದನ್ನು ಆಧರಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. 

ತೆಲುಗುದೇಶಂ ಶಾಸಕ ಕೆ ರಘುರಾಮ ಕೃಷ್ಣಂ ರಾಜು ಅವರ ದೂರಿನ ಮೇರೆಗೆ ಜಗನ್‌, ಮಾಜಿ ಪೊಲೀಸ್ ಮಹಾನಿರ್ದೇಶಕ (ಗುಪ್ತಚರ) ಪಿಎಸ್‌ಆರ್ ಆಂಜನೇಯುಲು, ಮಾಜಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಸಿಐಡಿ) ಮತ್ತು ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಯ ಮಾಜಿ ಅಧೀಕ್ಷಕಿ ಡಾ ಜಿ ಪ್ರಭಾವತಿ ವಿರುದ್ಧವೂ ಪ್ರಕರಣ ದಾಖಲಾಗಿದೆ.

2001ರಲ್ಲಿ ರಘುರಾಮ ಕೃಷ್ಣಂ ರಾಜು ಅವರನ್ನು ಆಂಧ್ರ ಸಿಐಡಿ ಸಿಬ್ಬಂದಿ ಹೈದರಾಬಾದ್‌ನಲ್ಲಿ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ‘ಆಗ ನನಗೆ ಸಿಐಡಿ ಅಧಿಕಾರಿ ಪಿ.ವಿ. ಸುನೀಲ್ ಕುಮಾರ್, ಆಂಜನೇಯುಲು ಮತ್ತು ಇತರ ಕೆಲವು ಪೊಲೀಸ್ ಅಧಿಕಾರಿಗಳು ರಬ್ಬರ್ ಬೆಲ್ಟ್ ಮತ್ತು ಲಾಠಿಯಿಂದ ಥಳಿಸಿದ್ದರು. 

ಎದೆ ಮೇಲೆ ಕುಳಿತು ಉಸಿರುಗಟ್ಟಿಸಲು ಯತ್ನಿಸಿದರು. ಜಗನ್‌ ಅವರ ಸೂಚನೆ ಮೇರೆಗೆ ನನಗೆ ಹೃದಯ ಸಂಬಂಧಿ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳಲೂ ಅವಕಾಶ ನೀಡಲಿಲ್ಲ. ಪೊಲೀಸ್ ಸಿಬ್ಬಂದಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದರು’ ಎಂದು ರಾಜು ದೂರಿದ್ದಾರೆ. ಈ ದೂರು ಆಧರಿಸಿ ಜಗನ್‌ ವಿರುದ್ಧ ಕೊಲೆ ಯತ್ನ, ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಕ್ರಿಮಿನಲ್ ಪಿತೂರಿ ಮುಂತಾದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.