ಸಾರಾಂಶ
ಜಾಮನಗರ (ಗುಜರಾತ್): ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ನವನಗರ (ಇಂದಿನ ಜಾಮನಗರ) ಸಂಸ್ಥಾನದ ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆ. ದಸರಾ ದಿನದಂದೇ ಮಹಾರಾಜಾ ಶತ್ರು ಶಲ್ಯಸಿಂಹ ಜಡೇಜಾ ಈ ಘೋಷಣೆ ಮಾಡಿದ್ದಾರೆ.
‘ದಸರಾ ಪಾಂಡವರು ವನವಾಸದಿಂದ ಮರಳಿದ ದಿನವಾಗಿದೆ. ಇಂದು ಅಜಯ್ ನನ್ನ ಉತ್ತರಾಧಿಕಾರಿಯಾಗಲು ಒಪ್ಪಿದ್ದು ನನಗೆ ಸಂತಸ ತಂದಿದೆ. ಜಾಮ್ನಗರದ ಸೇವೆಗೆ ಅಜಯ್ ಸಿದ್ಧರಾಗಿರುವುದು ಜನರ ಪಾಲಿಗೆ ವರವಿದ್ದಂತೆ’ ಎಂದು ಶತ್ರುಶಲ್ಯಸಿಂಹ ಕೃತಜ್ಞತೆ ಸಲ್ಲಿಸಿದ್ದಾರೆ.
ಜಾಮನಗರದ ರಾಜ ಪರಿವಾರದ ವಂಶಸ್ಥರಾಗಿರುವ ಜಡೇಜಾ 1992-2000 ನಡುವೆ 196 ಏಕದಿನ ಹಾಗೂ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಶತ್ರುಶಲ್ಯಸಿಂಹ ಅವರು ಅಜಯ್ ಅವರ ತಂದೆ ಹಾಗೂ ಜಾಮಗರದಿಂದ 3 ಬಾರಿ ಸಂಸದರಾಗಿದ್ದ ದೌಲತ್‌ಸಿಂಗ್‌ಜಿ ಜಡೇಜಾ ಅವರ ಸಹೋದರ ಸಂಬಂಧಿಯಾಗಿದ್ದಾರೆ. 1966ರ ಫೆ.3ರಂದು ಸಿಂಹಾಸನಕ್ಕೇರಿದ್ದ ಇವರು ನೇಪಾಳದ ರಾಜಪರಿವಾರದ ಸದಸ್ಯೆಯನ್ನು ಮದುವೆಯಾಗಿ, ನಂತರ ವಿಚ್ಛೇದನ ಪಡೆದಿದ್ದರು. ವಿಶೇಷವೆಂದರೆ, ಶತ್ರುಶಲ್ಯಸಿಂಹ ಕೂಡ ಕ್ರಿಕೆಟರ್ ಆಗಿದ್ದು, ರಣಜಿ ಟ್ರೋಫಿ ಸೌರಾಷ್ಟ್ರ ತಂಡದ ಕ್ಯಾಪ್ಟನ್ ಆಗಿದ್ದರು.
ಕಾಶ್ಮೀರ: 16ರಂದು ಒಮರ್ ಅಬ್ದುಲ್ಲಾ ಪ್ರಮಾಣ ವಚನ ಸಾಧ್ಯತೆ
ಶ್ರೀನಗರ: ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಮೈತ್ರಿಕೂಟ, ಉಪರಾಜ್ಯಪಾಲ ಮನೋಜ್ ಸಿನ್ಹಾ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದೆ. ಸಿಎಂ ಆಗಿ ಆಯ್ಕೆಯಾಗಿರುವ ಒಮರ್ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.10 ವರ್ಷದ ಬಳಿಕ ಚುನಾವಣೆ ನಡೆದ ಇಲ್ಲಿ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಮೊದಲ ಬಾರಿ ಚುನಾಯಿತ ಸರ್ಕಾರ ರಚನೆ ಆಗುತ್ತಿದೆ. ಕಾಂಗ್ರೆಸ್ ಅಧಿಕೃತವಾಗಿ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ವಿಸ್ತರಿಸಿದ ನಂತರ, ನಿಯೋಜಿತ ಸಿಎಂ ಒಮರ್ ಅಬ್ದುಲ್ಲಾ ಅವರು ಉಪರಾಜ್ಯಪಾಲ ಮನೋಜ್ ಸಿನ್ಹಾ ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದರು. ಬುಧವಾರ ಒಮರ್ ಅಬ್ದುಲ್ಲಾ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.ಅಬ್ದುಲ್ಲಾ ಕಳೆದ ಗುರುವಾರ ಎನ್‌ಸಿ ನಾಯಕನಾಗಿ ಆಯ್ಕೆಯಾಗಿದ್ದರು. 2ನೇ ಬಾರಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ.
ಹರ್ಯಾಣ: ಅ.17ಕ್ಕೆ ಸೈನಿ ಸರ್ಕಾರ ಶಪಥ
ಚಂಡೀಗಢ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಸರ್ಕಾರ ಅ.17ರಂದು ಪ್ರಮಾಣ ವಚನ ಸ್ವೀಕರಿಸಲಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿ ಪಕ್ಷದ ಹಿರಿಯ ನಾಯಕರು ಹಾಗೂ ಅನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ.‘ಪ್ರಧಾನಿ ಮೋದಿ ಅವರ ಒಪ್ಪಿಗೆಯ ಮೇರೆಗೆ ಮುಖ್ಯಮಂತ್ರಿ ಹಾಗೂ ಅವರ ಮಂತ್ರಿಮಂಡಲದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಅ.17ರಂದು ಪಂಚಕುಲಾದಲ್ಲಿ ನಡೆಯಲಿದೆ’ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದಾರೆ.
ಖಟ್ಟರ್ ನಿರ್ಗಮನದ ಬಳಿಕ ಸಿಎಂ ಆಗಿದ್ದ ನಯಾಬ್ ಸಿಂಗ್ ಸೈನಿ ಅವರನ್ನೇ ಮುಖ್ಯಮಂತ್ರಿಯಾಗಿ ಪಕ್ಷ ಆಯ್ಕೆ ಮಾಡಿದೆ.ಅ.5ರಂದು 90 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿತ್ತು.
==
ಬಂಗಾಳದಲ್ಲಿ ವೈದ್ಯರ ಸಾಮೂಹಿಕ ರಾಜೀನಾಮೆ ತಿರಸ್ಕಾರ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಹಾಗೂ ಅಮರಣ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಸರ್ಕಾರಿ ಸ್ವಾಮ್ಯದ ಆಸ್ಪತ್ರೆ ಸುಮಾರು 130 ವೈದ್ಯರು ನೀಡಿದ್ದ ಸಾಮೂಹಿಕ ರಾಜೀನಾಮೆಯನ್ನು ಸರ್ಕಾರ ತಿರಸ್ಕರಿಸಿದೆ. ‘ಇವರು ವೈಯಕ್ತಿಕವಾಗಿ ರಾಜೀನಾಮೆ ನೀಡದೇ ಸಾಮೂಹಿಕವಾಗಿ ಸಹಿ ಹಾಕಿ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆಯನ್ನು ಅಮಾನ್ಯ ಮಾಡಲಾಗಿದೆ’ ಎಂದಿದೆ.ಆರ್.ಜಿ. ಕರ್ ಮೆಡಿಕಲ್ ಕಾಲೇಜಿನಲ್ಲಿನ ವೈದ್ಯೆ ರೇಪ್ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕೆ ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ, ಉಪವಾಸ ಬೆಂಬಲಿಸಿ ಆರ್.ಜಿ.ಕರ್ ಮೆಡಿಕಲ್ ಕಾಲೇಜು, ಎಸ್‌ಎಸ್‌ಕೆಎಂ, ಸಿಲಿಗುರಿಯ ಮೆಡಿಕಲ್ ಕಾಲೇಜಿನ 130 ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದರು.
ಈ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಯ ಪ್ರತಿಕ್ರಿಯಿಸಿದ್ದು,‘ ಸೇವಾ ನಿಯಮಗಳ ಪ್ರಕಾರ ಉದ್ಯೋಗಿ ತನ್ನ ರಾಜೀನಾಮೆಯನ್ನು ಉದ್ಯೋಗದಾತನಿಗೆ ನೇರವಾಗಿ ಕಳುಹಿಸದೇ ಇದ್ದರೆ ಅದು ರಾಜೀನಾಮೆ ಅಲ್ಲ. ವೈದ್ಯರು ಯಾವುದೇ ನಿರ್ದಿಷ್ಟ ಸಮಸ್ಯೆಗಳನ್ನು ಉಲ್ಲೇಖಿಸದೇ ಕೇವಲ ಸಾಮೂಹಿಕ ಸಹಿಗಳನ್ನು ಹಾಕಿ ರಾಜೀನಾಮೆ ನೀಡಿದ್ದಾರೆ. ನಿಯಮದ ಪ್ರಕಾರ ಅವರ ರಾಜೀನಾಮೆ ಮಾನ್ಯವಾಗಿಲ್ಲ. ಅವರೆಲ್ಲರೂ ವೈಯಕ್ತಿಕವಾಗಿ ಪತ್ಯೇಕವಾಗಿ ರಾಜೀನಾಮೆ ಸಲ್ಲಿಸಬೇಕು’ ಎಂದಿದ್ದಾರೆ.
ಉಪವಾಸ ನಿರತ ವೈದ್ಯರ ಸಂಖ್ಯೆ 11ಕ್ಕೇರಿಕೆ:
ಬೇಡಿಕೆ ಈಡೇರಿಕೆಗೆ 9 ಕಿರಿಯ ವೈದ್ಯರು ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದರು. ಮತ್ತೆ ಇಬ್ಬರು ವೈದ್ಯರು ಕೂಡ ಅಮರಣಾನಂತ ಉಪವಾಸ ಪ್ರತಿಭಟನೆ ಕೈಗೊಂಡಿದ್ದು, ಉಪವಾಸ ನಿರತ ವೈದ್ಯರ ಸಂಖ್ಯೆ 11ಕ್ಕೇರಿಕೆಯಾಗಿದೆ. ಈ ಪೈಕಿ 2 ವೈದ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.
==
ಮೋದಿಯಲ್ಲಿ ಅಗೋಚರ ಶಕ್ತಿ: ಬ್ರಿಟನ್ ಮಾಜಿ ಪ್ರಧಾನಿ ಜಾನ್ಸನ್
ಲಂಡನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ಬದಲಾವಣೆ ಹರಿಕಾರ. ಅವರಲ್ಲೊಂದು ಅಗೋಚರ ಮಾಂತ್ರಿಕ ಶಕ್ತಿ ಇದೆ ಎಂದು ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಬಣ್ಣಿಸಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ತಮ್ಮ ಆತ್ಮಕಥನ ‘ಅನ್‌ಲೀಶ್ಡ್’ ಅಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ಅವರೊಂದಿಗಿನ ತಮ್ಮ ಸಂಬಂಧ ಮತ್ತು ಭಾರತದೊಂದಿಗೆ ತಮ್ಮ ಸಂಬಂಧದ ಕುರಿತು ಜಾನ್ಸನ್ ವಿಸ್ತಾರವಾಗಿ ಬರೆದುಕೊಂಡಿದ್ದಾರೆ.
‘ಆಗ ನಾನು ಲಂಡನ್‌ನ ಮೇಯರ್ ಆಗಿದ್ದೆ. ಪ್ರಧಾನಿ ಮೋದಿ ಲಂಡನ್ ಪ್ರವಾಸ ಕೈಗೊಂಡಿದ್ದರು. ಆಗ ಅವರನ್ನು ನಾನು ಮೊದಲ ಬಾರಿ ಭೇಟಿ ಆಗಿದ್ದೆ. ಥೇಮ್ಸ್ ನದಿ ತಟದ ಸಿಟಿ ಹಾಲ್ ಆಫೀಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ನನ್ನ ಕೈಯನ್ನು ಎತ್ತಿಹಿಡಿದು ಹಿಂದಿಯಲ್ಲಿ ಏನೋ ಜಪಿಸಿದರು.
ಅದನ್ನು ನಾನು ಪುನರಾವರ್ತಿಸಲು ಸಾಧ್ಯವಾಗಲಿಲ್ಲವಾದರೂ ಅವರಲ್ಲಿನ ಅಗೋಚರ ಮಾಂತ್ರಿಕ ಶಕ್ತಿಯನ್ನು ನಾನು ಅನುಭವಿಸಿದೆ. ಅಂದಿನಿಂದಲೂ ಅವರ ಸಾಂಗತ್ಯವನ್ನು ನಾನು ಸಂಭ್ರಮಿಸಿದ್ದೇನೆ. ಏಕೆಂದರೆ ಅವರೊಬ್ಬ ಬದಲಾವಣೆಯ ಹರಿಕಾರ. ಭಾರತ- ಬ್ರಿಟನ್ ಸಂಬಂಧದಲ್ಲಿ ಯಾವ ಬದಲಾವಣೆಯನ್ನು ನಾವು ಬಯಸಿದ್ದೇವೋ ಅದು ಅವರಿಂದ ಮಾತ್ರ ಸಾಧ್ಯ. ಮೋದಿಯೊಂದಿಗೆ ನಾವು ಕೇವಲ ಮುಕ್ತ ವ್ಯಾಪಾರ ಒಪ್ಪಂದ ಮಾತ್ರವಲ್ಲದೇ, ದೀರ್ಘಕಾಲೀನ ಸಂಬಂಧವನ್ನು ಕಟ್ಟಿಕೊಳ್ಳಬಹುದು’ ಎಂದು ಜಾನ್ಸನ್ ಬಣ್ಣಿಸಿದ್ಧಾರೆ.