ಇಂದು ದಿಲ್ಲಿಯಲ್ಲಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟ ಮಾಜಿ ಪ್ರಧಾನಿ ಡಾ। ಸಿಂಗ್‌ ಅಂತ್ಯಕ್ರಿಯೆ

| Published : Dec 28 2024, 12:45 AM IST / Updated: Dec 28 2024, 08:04 AM IST

ಸಾರಾಂಶ

ವಯೋಸಹಜ ಅನಾರೋಗ್ಯದಿಂದ ಮೃತಪಟ್ಟ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಂತ್ಯಕ್ರಿಯೆ ಶನಿವಾರ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಬೆಳಗ್ಗೆ 11.45ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

 ನವದೆಹಲಿ : ವಯೋಸಹಜ ಅನಾರೋಗ್ಯದಿಂದ ಮೃತಪಟ್ಟ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಂತ್ಯಕ್ರಿಯೆ ಶನಿವಾರ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಬೆಳಗ್ಗೆ 11.45ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

ಇದಕ್ಕೂ ಮುನ್ನ, ಸಿಂಗ್‌ ಅವರ ಮೋತಿಲಾಲ್‌ ನೆಹರು ರಸ್ತೆಯ ನಿವಾಸದಿಂದ 8 ಗಂಟೆಗೆ ಮೆರವಣಿಗೆ ನಡೆಸಿ ಎಐಸಿಸಿ ಪ್ರಧಾನ ಕಚೇರಿಗೆ ಪಾರ್ಥಿವ ಶರೀರ ತರಲಾಗುತ್ತದೆ. ಬೆಳಗ್ಗೆ 8.30ರಿಂದ 9.30ರವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಎಐಸಿಸಿ ಕಚೇರಿಯಲ್ಲಿ ಅ‍ವಕಾಶ ಮಾಡಿಕೊಡಲಾಗುತ್ತದೆ. ನಂತರ ಅಂತ್ಯಸಂಸ್ಕಾರ ನಡೆಯಲಿರುವ ಸ್ಥಳದ ವರೆಗೆ ಮಾಜಿ ಪ್ರಧಾನಿಯ ಅಂತಿಮ ಮೆರವಣಿಗೆ ನಡೆಯಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಉಪಾಧ್ಯಾಯ ಅಂತ್ಯಕ್ರಿಯೆ ಕೂಡ ಇಲ್ಲೇ..:

ನಿಗಮಬೋಧ ಘಾಟ್‌ನಲ್ಲಿ ಜನಸಂಘ ನಾಯಕ ದೀನದಯಾಳ ಉಪಾಧ್ಯಾಯ, ಹಿರಿಯ ರಾಜಕಾರಣಿ ಸುಂದರಸಿಂಗ್‌ ಭಂಡಾರಿ, ಮಾಜಿ ಉಪರಾಷ್ಟ್ರಪತಿ ಕೃಷ್ಣಕಾಂತ್‌ ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌, ಮಾಜಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರ ಅಂತ್ಯಕ್ರಿಯೆ ಕೂಡ ನಿಗಮಬೋಧ ಘಾಟ್‌ನಲ್ಲೇ ನಡೆದಿತ್ತು.

ಅಂತ್ಯಕ್ರಿಯೆ ವಿಳಂಬ ಏಕೆ? ಡಾ। ಮನಮೋಹನ ಸಿಂಗ್‌ ಅವರು ಗುರುವಾರ ಮೃತಪಟ್ಟಿದ್ದರೂ ಅಮೆರಿಕದಲ್ಲಿರುವ ಅವರ ಪುತ್ರಿಯರ ಆಗಮನ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಮನಮೋಹನ ಸಿಂಗ್‌ ಅವರ ಪುತ್ರಿಯರು ಶುಕ್ರವಾರ ತಡರಾತ್ರಿ ಸ್ವದೇಶಕ್ಕೆ ಆಗಮಿಸಿದ್ದಾರೆ.

ಸಿಂಗ್‌ ಅಂತ್ಯಕ್ರಿಯೆ ಸ್ಥಳ ವಿವಾದ

ನವದೆಹಲಿ: ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಸ್ಥಳದ ವಿವಾದ ಸೃಷ್ಟಿಯಾಗಿದೆ. ಸಿಂಗ್‌ ಅಂತ್ಯಕ್ರಿಯೆಯನ್ನು ಇಂದಿರಾ ಗಾಂಧಿ ಸ್ಮಾರಕ ಇರುವ ಶಕ್ತಿಸ್ಥಳದಲ್ಲಿ ಮಾಡಬೇಕು. ಇದರಿಂದ ಸ್ಮಾರಕ ನಿರ್ಮಾಣಕ್ಕೆ ಅವಕಾಶ ಸಿಗುತ್ತದೆ. ನಿಗಮಬೋಧ ಘಾಟ್‌ನಲ್ಲಿ ಜಾಗದ ಕೊರತೆ ಇರುವ ಕಾರಣ ಸ್ಮಾರಕಕ್ಕೆ ಅವಕಾಶ ಸಿಗಲ್ಲ ಎಂದು ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಂಗ್‌ ಪತ್ನಿ ಗುರುಶರಣ್‌ ಕೌರ್‌ ಆಗ್ರಹಿಸಿದ್ದರು ಎಂದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪದೇ ಅಂತ್ಯಕ್ರಿಯೆಗೆ ನಿಗಮಬೋಧ ಘಾಟ್‌ ಸ್ಥಳ ನಿಗದಿಪಡಿಸಿದೆ. ಇದಕ್ಕೆ ಖರ್ಗೆ ಆಕ್ಷೇಪಿಸಿದ್ದು, ಸ್ಮಾರಕ ನಿರ್ಮಿಸಲು ಅನುಕೂಲವಾಗುವ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.

ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಖರ್ಗೆ ಆಗ್ರಹ 

ನವದೆಹಲಿ: ವಯೋಸಹಜ ಕಾಯಿಲೆಯಿಂದಾಗಿ ನಿಧನರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಅಂತ್ಯಸಂಸ್ಕಾರವನ್ನು, ಸ್ಮಾರಕ ನಿರ್ಮಿಸಲು ಅನುಕೂಲವಾಗುವಂತಹ ಸ್ಥಳದಲ್ಲಿ ನಡೆಸಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯವರಲ್ಲಿ ಶುಕ್ರವಾರ ಬೆಳಗ್ಗೆ ಮನವಿ ಮಾಡಿದ್ದಾರೆ.ಈ ಕುರಿತ ಮೋದಿಯವರೊಂದಿಗಿನ ಸಂಭಾಷಣೆಯ ಬಳಿಕ ಪತ್ರದ ಮುಖೇನ ಮಾಹಿತಿ ನೀಡಿರುವ ಖರ್ಗೆ, ‘ಧೀಮಂತ   ಹಾಗೂ ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆ ನೆರವೇರಿದಲ್ಲಿ ಸ್ಮಾರಕ ನಿರ್ಮಿಸುವ ಸಂಪ್ರದಾಯವನ್ನು ಮುಂದುವರೆಸಲೋಸುಗ ಈ ಮನವಿ ಮಾಡಿದ್ದೇನೆ’ ಎಂದರು.