ಸಂಕ್ರಾಂತಿಯಂದು ಉತ್ತರಾಯಣಯದ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಡೆದ ಅವಘಡ : 10 ಸಾವು

| Published : Jan 16 2025, 12:46 AM IST / Updated: Jan 16 2025, 04:47 AM IST

ಸಾರಾಂಶ

ಜನವರಿ 14ರ ಮಕರ ಸಂಕ್ರಾಂತಿ ವೇಳೆ ದೇಶದ ಹಲವು ರಾಜ್ಯಗಳಲ್ಲಿ ಉತ್ತರಾಯಣಯದ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಡೆದ ಅವಘಡಗಳಲ್ಲಿ 10 ಜನರು ಸಾವನ್ನಪ್ಪಿದ್ದು , ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗುಜರಾತ್‌, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ದುರಂತ ನಡೆದಿದೆ.

ನವದೆಹಲಿ: ಜನವರಿ 14ರ ಮಕರ ಸಂಕ್ರಾಂತಿ ವೇಳೆ ದೇಶದ ಹಲವು ರಾಜ್ಯಗಳಲ್ಲಿ ಉತ್ತರಾಯಣಯದ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ನಡೆದ ಅವಘಡಗಳಲ್ಲಿ 10 ಜನರು ಸಾವನ್ನಪ್ಪಿದ್ದು , ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗುಜರಾತ್‌, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ದುರಂತ ನಡೆದಿದೆ.

ಚೀನಾದ ಮಾಂಜಾ ದಾರಗಳ ಮಾರಾಟಕ್ಕೆ ನಿಷೇಧವಿದ್ದರೂ ಮಾರುಕಟ್ಟೆಗಳಲ್ಲಿ ಮಾಂಜಾ ದಾರಗಳು ಲಭ್ಯವಾಗುತ್ತಿದೆ. ಹರಿತವಾದ ಈ ದಾರಗಳು ಮಂಗಳವಾರ ಸಂಕ್ರಾಂತಿ ಸಂಭ್ರಮದಂದು ಹಲವರ ಪ್ರಾಣ ಕಸಿದಿದೆ. ಗುಜರಾತ್‌ನಲ್ಲಿ 4 ವರ್ಷದ ಮಗು ಸೇರಿದಂತೆ ಆರು ಮಂದಿ ಗಾಳಿಪಟದ ಹರಿತವಾದ ಮಾಂಜಾ ದಾರದಿಂದ ಕತ್ತು ಸೀಳಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತಿಯೊಬ್ಬರು ಮನೆಯ ಛಾವಣಿ ಮೇಲೆ ಗಾಳಿಪಟ ಹಾರಿಸುವ ಸಂದರ್ಭದಲ್ಲಿ ಆಯತಪ್ಪಿ ಸಾವನ್ನಪ್ಪಿದ್ದಾರೆ. ಇನ್ನು ಇಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿಯೂ ದಾರ ದುರಂತದಿಂದ ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ದಾರ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ನಾಸಿಕ್‌ನಲ್ಲಿಯೂ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ತೆಲಂಗಾಣದಲ್ಲಿ ಪೊಲೀಸ್‌ ಪೇದೆ ಸೇರಿದಂತೆ ಮೂವರಿಗೆ ಗಾಳಿಪಟದ ದಾರದಿಂದ ಕತ್ತು ಸೀಳಿ ಗಾಯಗೊಂಡಿದ್ದಾರೆ. ಮಾತ್ರವಲ್ಲದೇ ದೇಶದ ಹಲವು ಕಡೆಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ನಡುವೆ ಹಲವು ರಾಜ್ಯಗಳಲ್ಲಿ ನಿಷೇಧಿತ ಮಾಂಜಾ ಮಾರಾಟ ಮಾಡುತ್ತಿದ್ದ ಹಲವರನ್ನು ಬಂಧಿಸಲಾಗಿದೆ.