ವಂಶವಾಹಿ ಸಮಸ್ಯೆ ಇದ್ದ ಮಗು ಜನನ : ಸಮಸ್ಯೆ ಗುರುತಿಸುವಲ್ಲಿ ವಿಫಲರಾದ ವೈದ್ಯರ ವಿರುದ್ಧ ಕೇಸು!

| Published : Nov 29 2024, 01:04 AM IST / Updated: Nov 29 2024, 04:34 AM IST

infant child

ಸಾರಾಂಶ

ನವಜಾತ ಶಿಶುವೊಂದು ಗರ್ಭದಲ್ಲಿದ್ದಾಗಲೇ ಅನುವಂಶೀಯ ಸಮಸ್ಯೆಯಿಂದ ಬಳಲುತ್ತಿದ್ದುದನ್ನು ಗುರುತಿಸುವಲ್ಲಿ ವಿಫಲರಾದ 4 ವೈದ್ಯರ ವಿರುದ್ಧ ದೂರು ದಾಖಲಿಸಲಾಗಿದೆ.

ಆಲಪ್ಪುಳ: ನವಜಾತ ಶಿಶುವೊಂದು ಗರ್ಭದಲ್ಲಿದ್ದಾಗಲೇ ಅನುವಂಶೀಯ ಸಮಸ್ಯೆಯಿಂದ ಬಳಲುತ್ತಿದ್ದುದನ್ನು ಗುರುತಿಸುವಲ್ಲಿ ವಿಫಲರಾದ 4 ವೈದ್ಯರ ವಿರುದ್ಧ ದೂರು ದಾಖಲಿಸಲಾಗಿದೆ.

ಮಗುವಿನ ಪೋಷಕರಾದ ಅನೀಶ್‌ ಹಾಗೂ ಸುರುಮಿ ನೀಡಿದ ದೂರಿನನ್ವಯ ಕಡಪ್ಪುರಂನ ಮಹಿಳೆ ಹಾಗೂ ಮಕ್ಕಳ ಆಸ್ಪತ್ರೆಯ 2 ವೈದ್ಯೆಯರು ಹಾಗೂ ಖಾಸಗಿ ಪ್ರಯೋಗಾಲಯದ 2 ವೈದ್ಯರ ವಿರುದ್ಧ, ಅನ್ಯರ ಸುರಕ್ಷತೆ ಅಥವಾ ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪ ಹೊರಿಸಿ ಭಾರತೀಯ ನ್ಯಾಯ ಸಂಹಿತೆಯ ಅಡಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣ ಸಂಬಂಧ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ತಂಡ ತನಿಖೆ ನಡೆಸಲಿದ್ದು, ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದವರ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

ಏನಿದು ಘಟನೆ?:

ಸುರುಮಿ ಗರ್ಭಿಣಿಯಾಗಿದ್ದಾಗ ಕಡಪ್ಪುರಂ ಆಸ್ಪತ್ರೆಯಲ್ಲಿ ಆಕೆಯ ತಪಾಸಣೆ ನಡೆಸಿದ್ದ ವೈದ್ಯರು ಭ್ರೂಣದಲ್ಲಿರುವ ದೋಷಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದು, ವರದಿಗಳು ಸರಿಯಿದೆ ಎಂಬ ಭರವಸೆ ನೀಡಿದ್ದರು. ಆದರೆ ಪ್ರಸವದ ಸಮಯದಲ್ಲಿ ಭ್ರೂಣದಲ್ಲಿ ಚಲನೆ ಹಾಗೂ ಹೃದಯಬಡಿತ ಇರದ ಕಾರಣ ಆಕೆಯನ್ನು ಅಲಪ್ಪುಜದ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮಗು ಜನಿಸಿದ 4 ದಿನದ ಬಳಿಕವೇ ಅದನ್ನವರಿಗೆ ತೋರಿಸಲಾಗಿದ್ದು, ಅದರಲ್ಲಿ ಹಲವು ಆಂತರಿಕ ಹಾಗೂ ಬಾಹ್ಯ ದೋಷಗಳಿರುವುದು ಕಂಡುಬಂದಿದೆ.