ಸಾರಾಂಶ
ನವದೆಹಲಿ: ಸಾಕುಪ್ರಾಣಿಗಳನ್ನು ಅತಿ ಮುದ್ದಿನಿಂದ ಸಾಕುವವರ ನಡುವೆ ಎದ್ದುಕಾಣುವ ಚೀನಾದ ಮಹಿಳೆಯೊಬ್ಬರು, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೂ ಮತ್ಸರ ಬರುವಂತೆ ತನ್ನ 3 ನಾಯಿಗಳ ಲಾಲನೆ-ಪಾಲನೆ ಮಾಡುತ್ತಿದ್ದಾರೆ.
ಶಾಂಘೈನಲ್ಲಿ ವಾಸವಿರುವ ವೆಂಡಿ ಎಂಬ ಮಹಿಳೆ, ಮೋಚಿ, ಮಿಲ್ಕಿ, ಪಿಗ್ಗಿ ಹೆಸರಿನ 6, 5, 3 ವರ್ಷದ ನಾಯಿಗಳನ್ನು ಸಾಕಿದ್ದಾರೆ. ಆಕೆ ಅವುಗಳಿಗಾಗಿ ಬಟ್ಟೆ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ಖರೀದಿಸಲು ದಕ್ಷಿಣ ಕೊರಿಯಾ ಮತ್ತು ಜಪಾನ್ ತನಕ ಪ್ರಯಾಣ ಬೆಳೆಸುತ್ತಾರೆ. ಸಾಲದ್ದಕ್ಕೆ ವಿಶೇಷ ವಸ್ತುಗಳನ್ನು ಆನ್‌ಲೈನಲ್ಲಿಯೂ ತರಿಸಿಕೊಳ್ಳುತ್ತಾರೆ ಎಂದು ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ತನ್ನ ನಾಯಿಗಳಿಗಾಗಿ ಈಕೆ ‘ಯೀಕೆಮೊಚಿ’ ಹೆಸರಿನ ಇನ್ಸ್‌ಟಾಗ್ರಾಂ ಖಾತೆಯೊಂದನ್ನು ತೆರೆದಿದ್ದು, ಅದರಲ್ಲಿ ಅವುಗಳು ವಿಭಿನ್ನ ಉಡುಪುಗಳನ್ನು ಧರಿಸಿ ವಿವಿಧ ಭಂಗಿಯಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ವೆಂಡಿ ಆ ನಾಯಿಗಳ ವಸ್ತುಗಳಿರುವ, 24 ದಶಲಕ್ಷ ರು. ವೆಚ್ಚದ ಭವ್ಯ ಕಪಾಟನ್ನು ತೋರಿಸಿದ್ದರು. ಅದರಲ್ಲಿ ಡಿಸ್ನಿ, ಎಂಬ್ರಾಯ್ಡರಿ ಸೇರಿದಂತೆ ವಿವಿಧ ಮಾದರಿ ಮತ್ತು ವಿನ್ಯಾಸಗಳ 2,500ಕ್ಕೂ ಅಧಿಕ ಬಟ್ಟೆಗಳು, ಆಭರಣಗಳಿದ್ದವು. ಜೊತೆಗೆ, 46ರಿಂದ 58 ಸಾವಿರ ರು. ಬೆಲೆಯ ಜ್ಯಾಕೆಟ್, ಸನ್‌ಗ್ಲಾಸ್, ಬೆಲ್ಟ್ ಕೂಡ ಕಂಡುಬಂದಿದ್ದವು. ಇದು, ‘ಶ್ವಾನಗಳಿಗೂ ಇಷ್ಟು ಐಷಾರಾಮಿ ಜೀವನ ಸಿಗಬಹುದೇ’ ಎಂದು ವೀಕ್ಷಕರು ಹುಬ್ಬೇರಿಸುವಂತೆ ಮಾಡಿದೆ.