ಸಾರಾಂಶ
ನವದೆಹಲಿ: ಭಾರತಕ್ಕೆ ಗಡೀಪಾರಾಗಿರುವ ಉಗ್ರ ರಾಣಾ, ಅಮೆರಿಕದಲ್ಲಿ ಕುಳಿತುಕೊಂಡೇ ಮುಂಬೈ ದಾಳಿಗೆ ಸಂಚು ರೂಪಿಸಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೂಚನೆಯಂತೆ ಈ ಕೆಲಸ ಕೈಗೆತ್ತಿಕೊಂಡಿದ್ದ ರಾಣಾ, ದಾಳಿಗೆ ಅಗತ್ಯ ಮಾಹಿತಿ ಕಲೆಹಾಕಲು ತನ್ನ ಸ್ನೇಹಿತ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದ.
ಹೆಡ್ಲಿ ಮುಂಬೈಗೆ ಆಗಮಿಸಿದ ವೇಳೆ ಅಲ್ಲಿನ ತನ್ನ ಕಚೇರಿಯಲ್ಲೇ ತಂಗಲು, ಮುಂಬೈನಲ್ಲಿ ಎಲ್ಲೆಡೆ ಸಂಚರಿಸಲು ವ್ಯವಸ್ಥೆ ಮಾಡಿದ್ದ. ಈ ನೆರವು ಪಡೆದುಕೊಂಡು ಹೆಡ್ಲಿ, ಮುಂಬೈನಲ್ಲ ಉಗ್ರರು ದಾಳಿ ನಡೆಸಬೇಕಾಗಿದ್ದ ಸ್ಥಳಗಳ ಪರಿಶೀಲನೆ ನಡೆಸಿ ಅದರ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದ.
ಈ ದಾಳಿಯ ಕುರಿತು ತನಿಖೆ ನಡೆಸಿದ್ದ ಎನ್‌ಐಎ, ಹೆಡ್ಲಿ ಮುಂಬೈಗೆ ಬಂದಿದ್ದ ವೇಳೆ ರಾಣಾ ಆತನಿಗೆ 231 ಸಲ ಫೋನ್ ಕರೆ ಮಾಡಿದ್ದ ಮಾಹಿತಿಯನ್ನು ಕಲೆ ಹಾಕಿತ್ತು. ಇದಲ್ಲದೇ ಹೆಡ್ಲಿಗೆ ಭಾರತದ ವೀಸಾ ಪಡೆಯಲು ನೆರವಾಗಿದ್ದ. ಈ ಮಾಹಿತಿಯನ್ನು ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಪಾಕ್ ಸೇನೆಯಲ್ಲಿ ವೈದ್ಯನಾಗಿದ್ದ ರಾಣಾ ಐಎಸ್‌ಐ ಅಣತಿಯಂತೆ ಕೆನಡಾಕ್ಕೆ ತೆರಳಿ ಉಗ್ರನಾದ!
ನವದೆಹಲಿ: ತಹಾವೂರ್ ರಾಣಾ ಉಗ್ರನಾಗುವುದಕ್ಕೂ ಮೊದಲು ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿದ್ದ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಾಹಿವಾಲ್‌ನಲ್ಲಿ ಜನಿಸಿದ್ದ ರಾಣಾರ ತಂದೆಗೆ ಮಗ ವೈದ್ಯನಾಗಬೇಕು ಎನ್ನುವ ಆಸೆ.
ಭದ್ರತಾ ಸೇವೆಗಳಿಗೆ ಸೇರುವ ಕನಸು ಕಂಡಿದ್ದ ರಾಣಾ ಕೊನೆಗೆ ತಂದೆ ಆಸೆಯಂತೆ ವೈದ್ಯನಾಗಿದ್ದ. ಬಳಿಕ ಪಾಕ್ ಸೇನೆಯ ವೈದ್ಯಕೀಯ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ 1989ರ ವೇಳೆಗೆ ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಎಸ್‌ನ ಸೂಚನೆಯಂತೆ ಕೆನಡಾಕ್ಕೆ ತೆರಳುವ ರಾಣಾ ಅಲ್ಲಿ ವಲಸೆ ಸೇವೆಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ.
ಆದರೆ ಮೇಲ್ನೋಟಕ್ಕೆ ಈ ಕೆಲಸವಾದರೂ ಆತ ಅಲ್ಲಿ ಪಾಕ್ ಪರವಾಗಿ ಗೂಢಚರ್ಯೆ ಮಾಡುತ್ತಿದ್ದ. ನಂತರ ಅಮೆರಿಕದ ಶಿಕಾಗೋಗೆ ಸ್ಥಳಾಂತರಗೊಂಡು ಅಲ್ಲಿ ತನ್ನ ಕಚೇರಿ ಆರಂಭಿಸಿದ್ದ. ಅಲ್ಲಿ ಆತನಿಗೆ ಪಾಕಿಸ್ತಾನ ಮೂಲದ ಡೇವಿಡ್ ಹೆಡ್ಲಿ ಸಂಪರ್ಕ ಬೆಳೆಯುತ್ತದೆ. ಆ ಸಂಪರ್ಕವೇ ಹೆಡ್ಲಿ ಮುಂದೆ ಭಾರತಕ್ಕೆ ಬರಲು ಮುಂಬೈ 26/11 ರ ದಾಳಿಗೆ ಸಂಚು ರೂಪಿಸಲು ಕಾರಣವಾಗುತ್ತದೆ.
;Resize=(128,128))