23 ಕೋಟಿ ಮೌಲ್ಯದ ಎಮ್ಮೆ ಈ ಬಾರಿ ಪುಷ್ಕರ್‌ ಮೇಳದ ವಿಶೇಷ

| Published : Oct 29 2025, 01:15 AM IST

ಸಾರಾಂಶ

23 ಕೋಟಿ ಮೌಲ್ಯದ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ ಈ ಬಾರಿ ರಾಜಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಪುಷ್ಕರ್ ಜಾನುವಾರು ಮೇಳದ ಪ್ರಮುಖ ಆಕರ್ಷಣೆ.

- 15 ಕೋಟಿಯ ಕುದುರೆ ಶಹಬಾಜ್‌ಗೂ ಭಾರೀ ಡಿಮ್ಯಾಂಡ್‌ನವದೆಹಲಿ: 23 ಕೋಟಿ ಮೌಲ್ಯದ ಎಮ್ಮೆ, 15 ಕೋಟಿ ಮೌಲ್ಯದ ಕುದುರೆ ಈ ಬಾರಿ ರಾಜಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಪುಷ್ಕರ್ ಜಾನುವಾರು ಮೇಳದ ಪ್ರಮುಖ ಆಕರ್ಷಣೆ.

ಪ್ರತಿ ವರ್ಷ ನಡೆಯುವ ಪುಷ್ಕರ್‌ ಮೇಳದಲ್ಲಿ ಭಾರತದಲ್ಲೇ ಅತ್ಯಂತ ದುಬಾರಿ ಜಾನುವಾರುಗಳನ್ನು ಪ್ರದರ್ಶಿಸಲಾಗುತ್ತದೆ. ಇಂಥ ಜಾನುವಾರುಗಳನ್ನು ಖರೀದಿಸಲು, ನೋಡಲೆಂದೇ ಭಾರೀ ಸಂಖ್ಯೆಯಲ್ಲಿ ಜನ ದೇಶ-ವಿದೇಶಗಳಿಂದ ಆಗಮಿಸುವುದು ವಿಶೇಷ.

23 ಕೋಟಿಯ ಅನ್‌ಮೋಲ್‌:

23 ಕೋಟಿ ಬೆಲೆ ಬಾಳುವ ರಾಜಸ್ಥಾನದ ಅನ್‌ಮೋಲ್‌ ಎಮ್ಮೆ ಮೇಳದ ಮತ್ತೊಂದು ವಿಶೇಷ. ಇದು ಮಾಮೂಲಿ ಎಮ್ಮೆ ಅಲ್ಲ, ಇದರ ತೂಕವೇ 1500 ಕೆ.ಜಿ. ಇದೆ. ಪ್ರತಿದಿನ ಸಾವಿರಾರು ರುಪಾಯಿ ವೆಚ್ಚ ಮಾಡಿ ಈ ಎಮ್ಮೆಗೆ ವಿಶೇಷ ಆಹಾರ ನೀಡಲಾಗುತ್ತದೆ. ಇದನ್ನು ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ. ಇದರಿಂದಲೇ ಮಾಸಿಕ 4 ಲಕ್ಷ ರು. ವರೆಗೆ ಆದಾಯ ಬರುತ್ತದೆ. ಇನ್ನು ಉಜ್ಜೈನ್‌ ಮೂಲದ ಮತ್ತೊಂದು ಎಮ್ಮೆ ರಾಣಾಗೆ 25 ಲಕ್ಷ ರು. ವರೆಗೆ ಬಿಡ್‌ ಬಂದಿದೆ ಅಂತೆ. 600 ಕೆ,ಜಿ. ತೂಕದ, 8 ಅಡಿ ಉದ್ದ ಹಾಗೂ 5.5 ಅಡಿ ಎತ್ತರದ ಈ ಎಮ್ಮೆಯ ಆಹಾರಕ್ಕೆಂದೇ ನಿತ್ಯ 1500 ರು. ವೆಚ್ಚ ಮಾಡುತ್ತೇವೆ ಎನ್ನುತ್ತಾರೆ ಮಾಲೀಕರು.

15 ಕೋಟಿಯ ಶಹಬಾಜ್‌:ಚಂಡೀಗಢದ ಗೇರಿ ಗಿಲ್‌ ಅವರ ಎರಡೂವರೆ ವರ್ಷದ ಕುದುರೆ ಶಹಬಾಜ್‌ ಪುಷ್ಕರ ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಹಲವು ಸ್ಪರ್ಧೆಗಳಲ್ಲಿ ಗೆದ್ದಿರುವ ಈ ಮಾರ್‌ವಾರಿ ತಳಿಯ ಕುದುರೆಗೆ ಈಗಾಗಲೇ ಗ್ರಾಹಕರು 15 ಕೋಟಿ ವರೆಗೆ ಬೆಲೆ ನಿಗದಿ ಮಾಡಿದ್ದಾರಂತೆ. ಅದೇ ರೀತಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿರುವ ಬಾದಲ್‌ ಕುದುರೆಗೂ ಭಾರೀ ಬೇಡಿಕೆ ಇದೆ. 11 ಕೋಟಿ ರು. ಕೊಟ್ಟು ಈ ಕುದುರೆ ಖರೀದಿಸಲು ಜನ ಮುಂದೆ ಬಂದಿದ್ದಾರೆ. ಆದರೆ, ಮಾಲೀಕರು ಮಾತ್ರ ಈ ಕುದುರೆ ಮಾರಲು ನಿರಾಕರಿಸಿದ್ದಾರೆ.