ಸಾರಾಂಶ
ನವದೆಹಲಿ: ಕರ್ನಾಟಕದ ಕೆಲವು ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದೆ ಎಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ), ತನಿಖೆ ಮತ್ತು ಕ್ರಮಕ್ಕೆ ಆದೇಶಿಸಿದೆ.ಹೋಟೆಲ್‌ಗಳಲ್ಲಿ ತಯಾರಿಸಲಾಗುವ ಆಹಾರದ ಸುರಕ್ಷತೆ ಹಾಗೂ ನೈರ್ಮಲ್ಯವನ್ನು ಗಮನದಲ್ಲಿಟ್ಟುಕೊಂಡು, ಇಡ್ಲಿ ಬೇಯಿಸುವಾಗ ಬಳಸಲಾಗುವ ಪ್ಲಾಸ್ಟಿಕ್ ಹಾಳೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ ಎಫ್‌ಎಸ್‌ಎಸ್‌ಎಐ, ರಾಜ್ಯ ಆಹಾರ ಸುರಕ್ಷತಾ ಇಲಾಖೆಗೆ ಈ ಮೇಲಿನಂತೆ ಸೂಚಿಸಿದೆ.
ಅಂತೆಯೇ, ‘ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಹಾಳೆ ಬಳಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಆಹಾರ ಸುರಕ್ಷತಾ ಇಲಾಖೆಗೆ ಸೂಚಿಸಲಾಗಿದೆ’ ಎಂದು ಎಫ್‌ಎಸ್‌ಎಸ್‌ಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಪ್ರಾಧಿಕಾರದ ಸಿಇಒ ಜಿ. ಕಮಲ ವರ್ಧಮ ರಾವ್, ‘ಪ್ಲಾಸ್ಟಿಕ್‌ನಿಂದ ಬಿಸ್ಫೆನಾಲ್, ಥಾಲೇಟ್‌ನಂತಹ ಹಾನಿಕಾರಕ ರಾಸಾಯನಿಕಗಳು ಆಹಾರವನ್ನು ಸೇರುತ್ತದೆ. ಅಧಿಕ ತಾಪಮಾನದಡಿ ಕಡಿಮೆ ಗುಣಮಟ್ಟದ ಅಥವಾ ಆಹಾರಕ್ಕೆ ಬಳಸಬಾರದಂತಹ ಪ್ಲಾಸ್ಟಿಕ್ ಉಪಯೋಗದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ’ ಎಂದು ತಿಳಿಸಿದ್ದಾರೆ.
ಇಡ್ಲಿ ಬೇಯಿಸಲು ಸೂಕ್ತ ವಿಧಾನವನ್ನು ಸೂಚಿಸಲಾಗಿದ್ದು, ಅದಕ್ಕೆ ಅನುಮೋದಿಸಲಾದ ವಸ್ತುಗಳನ್ನೇ ಬಳಸುವುದು ಕಡ್ಡಾಯವಾಗಿದೆ.