ಸಾರಾಂಶ
ಬಿಜೆಪಿಯ ಹಾಲಿ ಇಬ್ಬರು ಸಂಸದರಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಪಿಟಿಐ ನವದೆಹಲಿ
ಬಿಜೆಪಿಯ ಹಾಲಿ ಇಬ್ಬರು ಸಂಸದರಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಮೇಲಾಗಿ ಇಬ್ಬರೂ ರಾಜಕೀಯದಿಂದಲೇ ದೂರ ಉಳಿವ ಅರ್ಥದ ಮಾತು ಆಡಿದ್ದಾರೆ.
ಪಕ್ಷ ಈ ಬಾರಿ ಹಲವು ಸಂಸದರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಇವರು ಚುನಾವಣೆಯಿಂದ ಹಿಂದೆ ಸರಿದಿರುವುದು ಮಹತ್ವ ಪಡೆದಿದೆ.
ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿರುವುದರಿಂದ ಇವರು ನಿವೃತ್ತಿ ಘೋಷಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಪೂರ್ವ ದೆಹಲಿಯ ಸಂಸದರಾಗಿರುವ ಗೌತಮ್ ಗಂಭೀರ್ ಹಾಗೂ ಜಾರ್ಖಂಡ್‌ನ ಹಜಾರಿಬಾಗ್‌ನ ಸಂಸದರಾಗಿರುವ ಜಯಂತ್ ಸಿನ್ಹಾ ಶನಿವಾರ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರಿಗೆ ತಮ್ಮನ್ನು ಚುನಾವಣಾ ಸ್ಪರ್ಧೆಯಿಂದ ಮುಕ್ತಗೊಳಿಸುವಂತೆ ಕೋರಿದ್ದಾರೆ.
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಗೌತಮ್ ಗಂಭೀರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆಯಿಂದ ಮಾತ್ರವಲ್ಲ ತಾವು ರಾಜಕೀಯದಿಂದ ದೂರ ಉಳಿದು ಮತ್ತೆ ಕ್ರಿಕೆಟ್ ಬಗ್ಗೆ ಗಮನಹರಿಸುವುದಾಗಿ ಹೇಳಿದ್ದರೆ, ಜಯಂತ್ ಸಿನ್ಹಾ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದಾಗಿ ತಿಳಿಸಿದ್ದಾರೆ.