ಅಕ್ರಮ ಮಸೀದಿ ವಿರುದ್ಧ ದೇಶವ್ಯಾಪಿ ಹೋರಾಟ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕರೆ

| Published : Sep 15 2024, 01:47 AM IST / Updated: Sep 15 2024, 08:51 AM IST

Union Minister Giriraj Singh

ಸಾರಾಂಶ

ಶಿಮ್ಲಾದಲ್ಲಿನ ಅಕ್ರಮ ಮಸೀದಿ ವಿರುದ್ಧ ನಡೆದ ಪ್ರತಿಭಟನೆ ರೀತಿ ಇಡೀ ದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಸೀದಿಗಳ ವಿರುದ್ಧವೂ ಪ್ರತಿಭಟನೆ ನಡೆಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಶನಿವಾರ ಕರೆ ನೀಡಿದ್ದಾರೆ.

ನವದೆಹಲಿ: ಶಿಮ್ಲಾದಲ್ಲಿನ ಅಕ್ರಮ ಮಸೀದಿ ವಿರುದ್ಧ ನಡೆದ ಪ್ರತಿಭಟನೆ ರೀತಿ ಇಡೀ ದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಸೀದಿಗಳ ವಿರುದ್ಧವೂ ಪ್ರತಿಭಟನೆ ನಡೆಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಶನಿವಾರ ಕರೆ ನೀಡಿದ್ದಾರೆ.

ಶನಿವಾರ ಮಾತನಾಡಿದ ಅವರು, ‘ಹಿಮಾಚಲ ಪ್ರದೇಶದ ಹಿಂದೂಗಳು ದೇಶವನ್ನು ಒಗ್ಗೂಡಿಸಿದ್ದಾರೆ. ಅಕ್ರಮವಾಗಿ ಭೂಮಿ ಆಕ್ರಮಿಸಿಕೊಂಡಿದ್ದ ವಕ್ಫ್ ಮಂಡಳಿಗೆ ಈಗ ಸವಾಲೆಸೆದಿದ್ದಾರೆ. ಭಾರತದಲ್ಲಿ ಅಕ್ರಮವಾಗಿ ನಿರ್ಮಿಸಿದ 3 ಲಕ್ಷ ಮಸೀದಿಗಳಿವೆ. ಹೀಗಾಘಿ ದೇಶಾದ್ಯಂತ ಇಂಥ ಮಸೀದಿಗಳ ವಿರುದ್ಧ ಹೋರಾಡಬೇಕಿದೆ’ ಎಂದರು.

ಅಂಗಡಿ ಮುಚ್ಚಿ 2 ಗಂಟೆ ಬಂದ್‌: ಈ ನಡುವೆ ಅಕ್ರಮ ಮಸೀದಿಗಳ ವಿರುದ್ಧ ಹಿಮಾಚಲ ಪ್ರದೇಶದ ವಿವಿಧ ನಗರಗಳಲ್ಲಿ ಶನಿವಾರ ಅಂಗಡಿಗಳನ್ನು ಮುಚ್ಚಿ 2 ಗಂಟೆಗಳ ಕಾಲ ಬಂದ್‌ ಆಚರಿಸಲಾಯಿತು.

ಜ್ಞಾನವಾಪಿಯನ್ನು ‘ಮಸೀದಿ’ ಎನ್ನುವುದು ‘ದುರದೃಷ್ಟಕರ’: ಯೋಗಿ

ಗೋರಖಪುರ: ‘ಉತ್ತರಪ್ರದೇಶದ ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯುವುದು ದುರದೃಷ್ಟಕರ’ ಎಂದಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅದನ್ನು ‘ಪ್ರಭು ವಿಶ್ವನಾಥನ ಸಾಕಾರ ಸ್ವರೂಪ’ ಎಂದಿದ್ದಾರೆ.ಗೋರಖಪುರದ ದೀನ ದಯಾಳು ಉಪಾಧ್ಯಾಯ ವಿಶ್ವವಿದ್ಯಾಲಯದಲ್ಲಿ ‘ಸಾಮರಸ್ಯ ಸಮಾಜ ನಿರ್ಮಿಸುವಲ್ಲಿ ನಾಥ ಪಂಥದ ಕೊಡುಗೆ’ ಎಂಬ ಅಂತಾರಾಷ್ಟ್ರೀಯ ಗೋಷ್ಠಿಯಲ್ಲಿ ಮಾತನಾಡಿದ ಯೋಗಿ, ಕಾಶಿ ಹಾಗೂ ಜ್ಞಾನವಾಪಿಯ ಪ್ರಾಮುಖ್ಯತೆಯನ್ನು ವಿವರಿಸಿದರು.

ಯೋಗಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಅಬ್ಬಾಸ್‌ ಹೈದರ್‌, ‘ಜ್ಞಾನವಾಪಿ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಅದರ ಬಗ್ಗೆ ಹೇಳಿಕೆ ನೀಡುವ ಮೂಲಕ ಸಂವಿಧಾನದ ಮೇಲೆ ಪ್ರಮಾಣ ಮಾಡಿರುವ ಯೋಗಿ ನ್ಯಾಯಾಲಯಕ್ಕೆ ಗೌರವ ಕೊಡುತ್ತಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಸಮಾಜವನ್ನು ಒಡೆಯುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.ದೇವಸ್ಥಾನವಿದ್ದ ಜಾಗದಲ್ಲಿ ಜ್ಞಾನವಾಪಿ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಮುದಾಯ ಆರೋಪಿಸಿದ್ದು, ಮುಸ್ಲಿಮರು ಇದನ್ನು ಅಲ್ಲೆಗಳೆದಿದ್ದಾರೆ. ಈ ಪ್ರಕರಣ ಕೋರ್ಟ್‌ನ ಅಂಗಳದಲ್ಲಿದೆ.

ಕ್ಷೌರ ಮಾಡಿದವನಿಗೆ ರಾಹುಲ್‌ ಗಿಫ್ಟ್‌!

ರಾಯ್‌ಬರೇಲಿ: 3 ತಿಂಗಳ ಹಿಂದೆ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮ್ಮ ಗಡ್ಡ ಟ್ರಿಮ್‌ ಮಾಡಿದ್ದ ಕ್ಷೌರಿಕನಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಉಡುಗೊರೆಯನ್ನು ಕಳುಹಿಸಿದ್ದಾರೆ.

ಕಟಿಂಗ್‌ ಕುರ್ಚಿ, ಶಾಂಪೂ ಚೇರ್‌, ಯುಪಿಎಸ್‌ ಇನ್ವರ್ಟರ್‌ ಸೆಟ್ ಅನ್ನು ರಾಹುಲ್‌ ಉಡುಗೊರೆಯಾಗಿ ನೀಡಿದ್ದಾರೆ.ಈ ಕುರಿತು ಮಾಹಿತಿ ನೀಡಿ ಸಂತಸ ವ್ಯಕ್ತಪಡಿಸಿ ಮಾತನಾಡಿದ ಕ್ಷೌರಿಕ ಮಿಥುನ್, ಗುರುವಾರ ಇದ್ದಕ್ಕಿದ್ದಂತೆ ನನ್ನ ಅಂಗಡಿಯ ಬಳಿ ವಾಹನವೊಂದು ಬಂದು ನಿಂತ್ತಿತು. ಇಬ್ಬರು ವ್ಯಕ್ತಿಗಳು ಇಳಿದು ವಾಹನದಿಂದ ಎರಡು ಕುರ್ಚಿಗಳು, ಶಾಂಪೂ ಕುರ್ಚಿ, ಯುಪಿಎಸ್‌ ಇನ್ವರ್ಟರ್‌ ಸೆಟ್ ಹಾಗೂ ಇನ್ನಿತರೆ ಸಾಮಾನುಗಳನ್ನು ಇಳಿಸಿದರು. ಆ ವೇಳೆ ರಾಹುಲ್‌ಗಾಂಧಿ ಅವರು ಕರೆ ಮಾಡಿ ನನ್ನ ಬಳಿ ಮಾತನಾಡಿದರು. ನನಗೆ ತುಂಬಾ ಸಂತೋಷವಾಯಿತು ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಿದ್ದ ರಾಹುಲ್‌ ಗಾಂಧಿ ಮೇ 13ರಂದು ಲಾಲ್‌ಗಂಜ್‌ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ನಂತರ ಬ್ರಿಜೇಂದ್ರ ನಗರದಲ್ಲಿರುವ ಕ್ಷೌರಿಕ ಮಿಥುನ್‌ ಅವರ ಅಂಗಡಿಗೆ ಭೇಟಿ ನೀಡಿ ಗಡ್ಡ ಟ್ರಿಮ್‌ ಮಾಡಿಸಿಕೊಂಡಿದ್ದರು.

ರಾಹುಲ್‌ ಗಾಂಧಿಯನ್ನು ‘ಪಪ್ಪು’ ಎಂದ ನೋಯ್ಡಾ ಜಿಲ್ಲಾಧಿಕಾರಿ!

ಗ್ರೇಟರ್‌ ನೋಯ್ಡಾ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಗ್ರೇಟರ್‌ ನೋಯ್ಡಾ ಜಿಲ್ಲಾಧಿಕಾರಿ ಮಹೇಶ್‌ ವರ್ಮಾ ಅವರ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ‘ಪಪ್ಪು’ ಎಂದು ಟೀಕಿಸಿ ಕಮೆಂಟ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ. ಡೀಸಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ನಾಯಕರು ಆಗ್ರಹಿಸಿದ್ದಾರೆ.ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಶುಕ್ರವಾರ ಟ್ವೀಟ್ ಮಾಡಿದ್ದರು. ಇದಕ್ಕೆ ನೋಯ್ಡಾ ಡೀಸಿ ಖಾತೆಯಿಂದ ‘ಮೊದಲು ನಿಮ್ಮ ಬಗ್ಗೆ ಮತ್ತು ಪಪ್ಪು ಬಗ್ಗೆ ಯೋಚಿಸಿ’ ಎಂದು ಕಮೆಂಟ್‌ ಹಾಕಲಾಗಿದೆ. ಇದಕ್ಕೆ ಹಿರಿಯ ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಅಧಿಕಾರಿಗಳು ಬಿಜೆಪಿಗಳ ಚಮಚಾ ಆಗಿಬಿಟ್ಟಿದ್ದಾರೆ ಎಂದು ಖಂಡಿಸಿದ್ದಾರೆ.

ಆದರೆ ಇದಕ್ಕೆ ಡೀಸಿ ಸ್ಪಷ್ಟನೆ ನಿಡಿದ್ದು, ‘ನನ್ನ ಖಾತೆಯನ್ನು ಯಾರೋ ದುರ್ಬಳಕೆ ಮಾಡಿಕೊಂಡು ಕಮೆಂಟ್‌ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೂಈಡಲಾಗುವುದು ಹಾಗೂ ಕಮೆಂಟ್‌ ಅಳಿಸಿ ಹಾಕಲಾಗಿದೆ’ ಎಂದಿದ್ದಾರೆ.