10 ಗ್ರಾಂ ಚಿನ್ನದ ಬೆಲೆ 89,400 ರು.ಗೆ ನೆಗೆದಿದೆ : ಇದು ಸಾರ್ವಕಾಲಿಕ ಗರಿಷ್ಠ ನೆಗೆತ

| N/A | Published : Feb 20 2025, 12:48 AM IST / Updated: Feb 20 2025, 05:44 AM IST

ಸಾರಾಂಶ

ಚಿನ್ನದ ದರ ಬುಧವಾರ ದಿಲ್ಲಿ ಮಾರುಕಟ್ಟೆಯಲ್ಲಿ 900 ರು. ಏರಿದ್ದು, 10 ಗ್ರಾಂ ಚಿನ್ನದ ಬೆಲೆ 89,400 ರು.ಗೆ ನೆಗೆದಿದೆ. ಇದು ಸಾರ್ವಕಾಲಿಕ ಗರಿಷ್ಠವಾಗಿದೆ.

ನವದೆಹಲಿ: ಚಿನ್ನದ ದರ ಬುಧವಾರ ದಿಲ್ಲಿ ಮಾರುಕಟ್ಟೆಯಲ್ಲಿ 900 ರು. ಏರಿದ್ದು, 10 ಗ್ರಾಂ ಚಿನ್ನದ ಬೆಲೆ 89,400 ರು.ಗೆ ನೆಗೆದಿದೆ. ಇದು ಸಾರ್ವಕಾಲಿಕ ಗರಿಷ್ಠವಾಗಿದೆ.

ಶೇ.99.9 ಶುದ್ಧತೆಯ ಚಿನ್ನದ ಬೆಲೆ ಹಿಂದಿನ ದಿನ 88,500 ರು.ಗೆ ಇದ್ದಿದ್ದು, 89,400 ರು.ಗೆ ಬುಧವಾರ ಏರುವ ಮೂಲಕ ಫೆ.14ರಂದು ತಲುಪಿದ್ದ ಬೆಲೆಯನ್ನು ಮತ್ತೆ ತಲುಪಿತು. ಈ ಮೂಲಕ ಈ ವರ್ಷ 10,010 ರು.ನಷ್ಟು ತುಟ್ಟಿ ಆದಂತಾಗಿದೆ.

ಬೆಂಗಳೂರಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆ 90,220 ರು. ಇದ್ದರೆ, ಆಭರಣ ಚಿನ್ನ 8,276 ರು. ದಾಖಲಾಗಿದೆ. ಬೆಳ್ಳಿ ಬೆಲೆ 1,02,900 ರು.ಗೆ ಏರಿದೆ.

ಝೆಲೆನ್ಸ್‌ಕಿ ಓರ್ವ ಸರ್ವಾಧಿಕಾರಿ: ಟ್ರಂಪ್‌ ವಾಗ್ದಾಳಿ

ಕೀವ್: ‘ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್‌ಕಿ ಓರ್ವ ಸರ್ವಾಧಿಕಾರಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಈ ಮೊದಲು ‘ಟ್ರಂಪ್‌ ರಷ್ಯಾದ ಅಪಪ್ರಚಾರದ ಬಲಿಪಶುವಾಗಿದ್ದಾರೆ’ ಎಂದು ಝೆಲೆನ್ಸ್‌ಕಿ ಟೀಕಿಸಿದ್ದರು. ಇದರಿಂದ ಕೆಂಡಾಮಂಡಲರಾಗಿರುವ ಟ್ರಂಪ್‌, ಅವರನ್ನು ಹಾಸ್ಯಗಾರ ಎಂದು ಕರೆದಿದ್ದು, ‘ಝೆಲೆನ್ಸ್‌ಕಿ ಚುನಾವಣೆಯಿಲ್ಲದ ಸರ್ವಾಧಿಕಾರಿ. ಆತ ಬೇಗ ಮುಂದುವರೆಯದಿದ್ದರೆ ಅವರ ದೇಶವೇ ಉಳಿಯಲಿಕ್ಕಿಲ್ಲ’ ಎಂದು ಟ್ರಥ್‌ ಮಾಧ್ಯಮದಲ್ಲಿ ಬರೆದಿದ್ದಾರೆ.

ಝೆಲೆನ್ಸ್‌ಕಿ ಅಧಿಕಾರಾವಧಿ ಕಳೆದ ವರ್ಷವೇ ಮುಗಿದಿದ್ದರೂ, ದೇಶ ಯುದ್ಧಗ್ರಸ್ತವಾಗಿರುವ ಕಾರಣ ಚುನಾವಣೆ ನಡೆದಿಲ್ಲ.ಅತ್ತ ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಟ್ರಂಪ್‌ರನ್ನು ಭೇಟಿಯಾಗುವ ಬಯಕೆ ವ್ಯಕ್ತಪಡಿಸಿದ್ದು, ತಯಾರಿ ನಡೆಯುತ್ತಿದೆ ಎಂದಿದ್ದಾರೆ.

ಮೇ 7ರಿಂದ 31ರವರೆಗೆ ತೆಲಂಗಾಣದಲ್ಲಿ ಮಿಸ್‌ ವರ್ಲ್ಡ್‌ ಸ್ಪರ್ಧೆ

ಮುಂಬೈ: ಮಿಸ್‌ ವರ್ಲ್ಡ್‌ ಸ್ಪರ್ಧೆಯ 72ನೇ ಆವೃತ್ತಿಯು ತೆಲಂಗಾಣದಲ್ಲಿ ಮೇ 7ರಿಂದ 31ರವರೆಗೆ ನಡೆಯಲಿದೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.ಸ್ಪರ್ಧೆಯಲ್ಲಿ 120ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಅವರು ಕೇವಲ ಪ್ರತಿಷ್ಠಿತ ಪ್ರಶಸ್ತಿಗಾಗಿ ಮಾತ್ರವಲ್ಲದೆ, ಮಿಸ್ ವರ್ಲ್ಡ್ ಸಂಸ್ಥೆಯ ‘ಬ್ಯೂಟಿ ವಿಥ್ ಎ ಪರ್ಪಸ್’ ಎಂಬ ಧ್ಯೇಯಕ್ಕನುಸಾರವಾಗಿ ಅರ್ಥಪೂರ್ಣ ಉದ್ದೇಶಗಳನ್ನು ಸಾಧಿಸಲೂ ಸ್ಪರ್ಧಿಸುತ್ತಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಮೇ 7ರಂದು ತೆಲಂಗಾಣಕ್ಕೆ ಆಗಮಿಸಲಿದ್ದು, ಮೇ 31ರಂದು ಹೈದರಾಬಾದ್‌ನಲ್ಲಿ ಅಂತಿಮವಾಗಿ ಸುಂದರಿ ಆಯ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ಅದು ತಿಳಿಸಿದೆ.

ಕೊಚ್ಚಿ ನೌಕಾನೆಲೆ ಮಾಹಿತಿಯೂ ಸೋರಿಕೆ: ಒಬ್ಬ ಸೆರೆ

 ನವದೆಹಲಿ :  ಪಾಕಿಸ್ತಾನಕ್ಕೆ ಕಾರವಾರದ ನೌಕಾ ನೆಲೆಯ ರಹಸ್ಯ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಇಬ್ಬರು ಬಂಧಿತರಾದ ಬೆನ್ನಲ್ಲೇ ಕೇರಳದ ಕೊಚ್ಚಿಯ ನೌಕಾ ನೆಲೆಯ ರಹಸ್ಯಗಳನ್ನೂ ಪಾಕಿಸ್ತಾನ ಗುಪ್ತಚರರೊಂದಿಗೆ ಹಂಚಿಕೊಳ್ಳಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಹೇಳಿದ್ದು, ಒಬ್ಬನನ್ನು ಬಂಧಿಸಿದೆ.ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಿಂದ ವೆಥನ್ ಲಕ್ಷ್ಮಣ್ ತಾಂಡೇಲ್ ಮತ್ತು ಅಕ್ಷಯ್ ರವಿ ನಾಯ್ಕ್‌ರನ್ನು ಕಾರವಾರ ನೌಕಾನೆಲೆ ಮಾಹಿತಿ ಸೋರಿಕೆ ಕೇಸಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಅಭಿಲಾಷ್ ಪಿ. ಎ. ಎಂಬಾತನನ್ನು ಕೇರಳದ ಕೊಚ್ಚಿಯಲ್ಲಿ ಕೊಚ್ಚಿ ನೌಕಾನೆಲೆ ಮಾಹಿತಿ ಹಂಚಿಕೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಆರೋಪಿಗಳು ಪಾಕಿಸ್ತಾನದೊಂದಿಗೆ ಕಾರವಾರ ಮತ್ತು ಕೊಚ್ಚಿಯ ನೌಕಾ ನೆಲೆಯ ರಹಸ್ಯ ಮಾಹಿತಿಯನ್ನು ಅಂತರ್ಜಾಲದ ಮೂಲಕ ಹಂಚಿಕೊಂಡು ಹಣ ಪಡೆಯುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತ ಮೂವರು ಸೇರಿ ರಹಸ್ಯ ಮಾಹಿತಿ ಹಂಚಿಕೆಯ ಆರೋಪದಲ್ಲಿ ಇದುವರೆಗೆ 8 ಜನರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ಹೇಳಿದೆ.ಪ್ರಕರಣದಲ್ಲಿ ಎನ್‌ಐಎ ಇದುವರೆಗೆ ಇಬ್ಬರು ತಲೆಮರೆಸಿಕೊಂಡಿರುವ ಪಾಕಿಸ್ತಾನ ಗುಪ್ತಚರರು ಸೇರಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿದೆ.

ಮಧ್ಯಪ್ರದೇಶದಲ್ಲಿ ಎನ್‌ಕೌಂಟರ್: 4 ನಕ್ಸಲರ ಹತ್ಯೆ

ಬಾಲಾಘಾಟ್ (ಮಧ್ಯಪ್ರದೇಶ): ಛತ್ತೀಸ್‌ಗಢ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ ಬಾಲಾಘಾಟ್‌ನಲ್ಲಿ ಬುಧವಾರ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಅವರಲ್ಲಿ ಮೂವರು ಮಹಿಳೆಯರಾಗಿದ್ದಾರೆ.‘ಕಾರ್ಯಾಚರಣೆಯಲ್ಲಿ ರಾಜ್ಯ ಪೊಲೀಸರ ನಕ್ಸಲ್ ವಿರೋಧಿ ಹಾಕ್ ಪಡೆ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಭಾಗವಹಿಸಿದ್ದವು. ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ. ದೂರದ ಸ್ಥಳದಲ್ಲಿ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದಾಬರ್ ತಿಳಿಸಿದ್ದಾರೆ. ನಕ್ಸಲರಿಂದ ತಲಾ ಒಂದೊಂದು ಇನ್ಸಾಸ್ ರೈಫಲ್, ಸೆಲ್ಫ್ ಲೋಡಿಂಗ್ ರೈಫಲ್ ಮತ್ತು .303 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.