ಪಂಜಾಬಿ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ಗೆ ಉಗ್ರಗಾಮಿ ಪಟ್ಟ

| Published : Jan 02 2024, 02:15 AM IST

ಪಂಜಾಬಿ ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ಗೆ ಉಗ್ರಗಾಮಿ ಪಟ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕೆನಡಾದಲ್ಲಿರುವ ಸಿಧು ಹತ್ಯೆ ರೂವಾರಿ ಬ್ರಾರ್‌ನನ್ನು ಕೇಂದ್ರ ಗೃಹ ಸಚಿವಾಲಯ ಉಗ್ರಗಾಮಿ ಎಂದು ಘೋಷಣೆ ಮಾಡಿದೆ. ಈತನಿಗೆ ನಿಷೇಧಿತ ಖಲಿಸ್ತಾನಿ ಉಗ್ರರ ಜತೆ ಸಂಪರ್ಕವಿದ್ದು, ಶಾಂತಿ, ಕೋಮು ಸೌಹಾರ್ದತೆ ಕದಡಲು ಗೋಲ್ಡಿ ಪಿತೂರಿ ನಡೆಸಿದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿರುವುದಾಗಿ ತಿಳಿಸಿದೆ.

ನವದೆಹಲಿ: ಕೆನಡಾದಲ್ಲಿರುವ ಪಂಜಾಬ್ ಮೂಲದ ಕುಖ್ಯಾತ ಗ್ಯಾಂಗ್‌ಸ್ಟರ್‌, 2022ರ ಪಂಜಾಬ್‌ ಗಾಯಕ ಸಿಧು ಮೂಸೆವಾಲ ಹತ್ಯೆಯ ರೂವಾರಿ ಗೋಲ್ಡಿ ಬ್ರಾರ್‌ ಅಲಿಯಾಸ್‌ ಸತ್ವಿಂದರ್‌ ಸಿಂಗ್‌ನನ್ನು ‘ಭಯೋತ್ಪಾದಕ’ ಎಂದು ಕೇಂದ್ರ ಸರ್ಕಾರ ಸೋಮವಾರ ಘೋಷಣೆ ಮಾಡಿದೆ.

ಗೋಲ್ಡಿ ಬ್ರಾರ್‌, ನಿಷೇಧಿತ ಖಲಿಸ್ತಾನಿ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌’ ನೊಂದಿಗೆ ಸಂಬಂಧ ಹೊಂದಿದ್ದಾನೆ. ಅಲ್ಲದೇ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿರುವ ಆತ ಅನೇಕ ಹತ್ಯೆಗಳಲ್ಲೂ ಭಾಗಿಯಾಗಿದ್ದಾನೆ ಎಂದು ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೇ ಗೋಲ್ಡಿ ಬ್ರಾರ್‌, ರಾಷ್ಟ್ರೀಯವಾದಿ ನಾಯಕರಿಗೆ ಬೆದರಿಕೆ ಕರೆಗಳನ್ನು ಮಾಡುವಲ್ಲಿ ತೊಡಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಕುರಿತು ಪೋಸ್ಟ್‌ ಮಾಡಿದ್ದಾನೆ. ಹೀಗಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.‘ಗೋಲ್ಡಿ ಬ್ರಾರ್ ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವಲ್ಲಿ ತೊಡಗಿಸಿಕೊಂಡಿದ್ದಾನೆ. ಕೊಲೆಗಡುಕ ಶಾರ್ಪ್ ಶೂಟರ್‌ಗಳಿಗೆ ಆತ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ. ‘ಗೋಲ್ಡಿ ಬ್ರಾರ್‌ ಮತ್ತು ಆತನ ಸಹಚರರು ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಘಟಕಗಳನ್ನು ಹೆಚ್ಚಿಸುವುದು, ಉದ್ದೇಶಿತ ಹತ್ಯೆಗಳನ್ನು ನಡೆಸುವುದು ಮತ್ತು ಇತರ ಯೋಜನೆಗಳ ವಿರೋಧಿಸುವ ಮೂಲಕ ಪಂಜಾಬ್ ರಾಜ್ಯದಲ್ಲಿ ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡಲು ಪಿತೂರಿ ನಡೆಸುತ್ತಿದ್ದಾರೆ’ ಎಂದು ಸಚಿವಾಲಯ ತಿಳಿಸಿದೆ. 2022ರಲ್ಲಿ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಪಂಜಾಬ್‌ ಗಾಯಕ ಸಿಧು ಮೂಸೆವಾಲಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಳಿಕ ಗೋಲ್ಡಿ ಬ್ರಾರ್‌ ಹತ್ಯೆ ಹಿಂದಿನ ಪ್ರಮುಖ ರೂವಾರಿ ಎಂಬುದು ತಿಳಿದು ಬಂದಿತ್ತು. ಆತನ ಹಸ್ತಾಂತರಕ್ಕಾಗಿ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು.