ಮೇಕ್‌ ಇನ್‌ ಇಂಡಿಯಾಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್‌ಟಾಪ್‌ ಆಮದು ಮೇಲಿನ ನಿರ್ಬಂಧ ರದ್ದು

| Published : Dec 31 2024, 01:01 AM IST / Updated: Dec 31 2024, 04:25 AM IST

ಮೇಕ್‌ ಇನ್‌ ಇಂಡಿಯಾಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್‌ಟಾಪ್‌ ಆಮದು ಮೇಲಿನ ನಿರ್ಬಂಧ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಮೇಕ್‌ ಇನ್‌ ಇಂಡಿಯಾಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್‌ಟಾಪ್‌ ಮತ್ತು ಗ್ಯಾಜೆಟ್‌ಗಳ ಆಮದಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸರ್ಕಾರ ಇದೀಗ 2025ರಿಂದ ಗ್ಯಾಜೆಟ್‌ಗಳ ಆಮದಿಗೆ ಮುಕ್ತ ಅನುಮತಿ ನೀಡಿದೆ.  

ನವದೆಹಲಿ: ಮೇಕ್‌ ಇನ್‌ ಇಂಡಿಯಾಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್‌ಟಾಪ್‌ ಮತ್ತು ಗ್ಯಾಜೆಟ್‌ಗಳ ಆಮದಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸರ್ಕಾರ ಇದೀಗ 2025ರಿಂದ ಗ್ಯಾಜೆಟ್‌ಗಳ ಆಮದಿಗೆ ಮುಕ್ತ ಅನುಮತಿ ನೀಡಿದೆ. ದೇಶದ ಬಹುಬೇಡಿಕೆಯ ಈ ಗ್ಯಾಜೆಟ್‌ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಗತ್ಯ ಬಿದ್ದರೆ ಈ ಗ್ಯಾಜೆಟ್‌ಗಳ ಆಮದನ್ನು ಮಧ್ಯಂತರದಲ್ಲಿ ಮರು ಪರಿಶೀಲಿಸುವ ಮತ್ತು ಆಮದಿಗೆ ಮತ್ತಷ್ಟು ಅನುಮತಿ ನೀಡುವ ಅವಕಾಶವನ್ನೂ ಸರ್ಕಾರ ಮುಕ್ತವಾಗಿ ಇರಿಸಿಕೊಂಡಿದೆ.

ಲ್ಯಾಪ್‌ಟಾಪ್‌ಗಳ ದೇಶೀಯ ಉತ್ಪಾದನೆಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಇದರಿಂದ ಲ್ಯಾಪ್‌ಟಾಪ್‌ಗಳ ಆಮದು ವಾರ್ಷಿಕವಾಗಿ ಸುಮಾರು ಶೇ.5ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಈ ಕೊರತೆಯನ್ನು ವರ್ಷದ ಮಧ್ಯಂತರದ ಬಳಿಕ ದೇಶೀಯ ಉತ್ಪಾದನೆಯಿಂದ ಸರಿದೂಗಿಸಿಕೊಳ್ಳುುವ ಆಶಾಭಾವನೆ ಸರ್ಕಾರಕ್ಕಿದೆ.

ಇದೀಗ 2025ರಲ್ಲಿ ಲ್ಯಾಪ್‌ಟಾಪ್‌ ಆಮದಿಗೆ ಅವಕಾಶ ನೀಡುವುದರಿಂದ ವಿದೇಶಿ ಕಂಪನಿಗಳಿಗೆ ಸ್ಥಳೀಯವಾಗಿ ಈ ಗ್ಯಾಜೆಟ್‌ಗಳ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶವನ್ನೂ ನೀಡಿದಂತಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ-ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡಂತಾಗುತ್ತದೆ.

ರೈತರಿಂದ ಪಂಜಾಬ್‌ ಬಂದ್‌: ಜನಜೀವನ ಸ್ತಬ್ಧ

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಪಂಜಾಬ್‌ ಬಂದ್‌ನಿಂದಾಗಿ ರಾಜ್ಯದ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು.

ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಈ ಬಂದ್‌ನಿಂದಾಗಿ ರಾಜ್ಯದ ಹಲವೆಡೆ ರೈಲು ಮತ್ತು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದರೆ, ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್‌ ಆಗಿದ್ದವು. ಪಟಿಯಾಲ, ಜಲಂಧರ್‌, ಅಮೃತಸರ, ಪಟಾನ್‌ಕೋಟ್‌ ಸೇರಿ ಹಲವೆಡೆ ರೈತರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಹಾಗೂ 35 ದಿನಗಳಿಂದ ಆಮರಣಾಂತ ನಿರಶನ ನಡೆಸುತ್ತಿರುವ ಮುಖಂಡ ಜಗ್‌ಜಿತ್‌ ಸಿಂಗ್‌ ದಲ್ಲೇವಾಲ ಅವರ ಗೌರವಾರ್ಥವಾಗಿ ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ ಈ ಬಂದ್‌ಗೆ ಕರೆ ನೀಡಿತ್ತು.

ವಾಗ್ವಾದ, ಪ್ರಯಾಣಿಕರ ಪರದಾಟ:

ಬಂದ್‌ನಿಂದಾಗಿ ದೂರದೂರಿಗೆ ಹಾಗೂ ಅಗತ್ಯ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು. ಇದರಿಂದ ಕೆಲ ಕಡೆ ಪ್ರಯಾಣಿಕರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದವೂ ನಡೆಯಿತು.ಬಂದ್‌ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರಾನ್ಸ್‌ಪೋರ್ಟ್‌ ಮಾಲೀಕರು, ನೌಕರರ ಯೂನಿಯನ್‌ಗಳು ಮತ್ತು ಧಾರ್ಮಿಕ ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ ಎಂದು ರೈತ ನಾಯಕ ಸರ್ವನ್‌ ಸಿಂಗ್‌ ಪಂಧೇರ್‌ ಹೇಳಿದ್ದಾರೆ.

2025ರಲ್ಲಿ ಜಿಡಿಪಿ ಶೇ.6.6ರಲ್ಲಿ ಪ್ರಗತಿ: ಆರ್‌ಬಿಐ ವರದಿ

ಮುಂಬೈ: ಮುಂಬರುವ 2025ರಲ್ಲಿ ಭಾರತದ ಜಿಡಿಪಿ ಪ್ರಗತಿಯು ಶೇ.6.6ರಲ್ಲಿ ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿದೆ.ಸೋಮವಾರ ಹಣಕಾಸು ಸ್ಥಿರತಾ ವರದಿಯನ್ನು ಬಿಡುಗಡೆ ಮಾಡಿದ್ದು, ‘2023ರಲ್ಲಿ ಶೇ.8.2 ಮತ್ತು ಶೇ.8.1ರ ಬೆಳವಣಿಗೆಯಲ್ಲಿದ್ದ ಜೆಡಿಪಿಯು 2024ರಲ್ಲಿ ಶೇ.6ಕ್ಕೆ ಕುಸಿತಕಂಡಿತ್ತು. ಆದರೆ ಮುಂಬರುವ ವರ್ಷದಲ್ಲಿ ಶೇ.6.6 ಇರಲಿದೆ’ ಎಂದು ಹೇಳಿದೆ.

‘ಬ್ಯಾಂಕಿಂಗ್‌ನಲ್ಲಿನ ಗುಣಾತ್ಮಕ ಬದಲಾವಣೆ, ಸರ್ವೀಸ್‌ ಕ್ಷೇತ್ರದಲ್ಲಿನ ರಫ್ತು, ಹೂಡಿಕೆಯಲ್ಲಿ ಹೆಚ್ಚಳ ಮತ್ತು ಸುಲಲಿತ ಹಣಕಾಸು ಪರಿಸ್ಥಿತಿಯು ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿಗೆ ಕಾರಣವಾಗಲಿದೆ. ಹವಾಮಾನ ಬದಲಾವಣೆಯಿಂದಾಗ ಆಹಾರ ಪದಾರ್ಥಗಳ ಹಣದುಬ್ಬರ ಏರಿಕೆಯಾಗಲಿದೆ’ ಎಂದು ಹೇಳಿದೆ.