ಸಾರಾಂಶ
ನವದೆಹಲಿ: ಡಿ.26ರಂದು ನಿಧನರಾದ ಮಾಜಿ ಪ್ರಧಾನಿ ಡಾ। ಮನಮೋಹನ್ ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 4 ಸ್ಥಳಗಳನ್ನು ಅಂತಿಮಗೊಳಿಸಿದೆ. ಇದಕ್ಕಾಗಿ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಸಿಬ್ಬಂದಿ ಸಂಜಯ್ ಗಾಂಧಿ ಅವರ ಸ್ಮಾರಕವಿರುವ ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬದೊಂದಿಗೆ 3-4 ಸ್ಥಳಗಳ ಕುರಿತು ಕೇಂದ್ರ ಚರ್ಚೆ ನಡೆಸಿದೆ. ಆದರೆ ಯಾವುದೂ ಅಂತಿಮವಾಗಿಲ್ಲ. ಸ್ಮಾರಕ ನಿರ್ಮಾಣಕ್ಕೂ ಮುನ್ನ ಸಿಂಗ್ ಹೆಸರಿನಲ್ಲಿ ಟ್ರಸ್ಟ್ ತೆರೆಯಲಿದ್ದು, ಆ ಬಳಿಕ ಟ್ರಸ್ಟ್ ಹೆಸರಿಗೆ ಭೂಮಿಯನ್ನು ಹಂಚಲಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್‌ನಲ್ಲಿ ₹1.77 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: 2023ಕ್ಕಿಂತ ಶೇ.7 ಅಧಿಕ
ನವದೆಹಲಿ: 2024ರ ಡಿಸೆಂಬರ್‌ನಲ್ಲಿ 1.77 ಲಕ್ಷ ಕೋಟಿ ರು. ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದ್ದು, ಇದು 2023ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.7.3ರಷ್ಟು ವೃದ್ಧಿಯಾಗಿದೆ. 2023ರ ಡಿಸೆಂಬರ್‌ನಲ್ಲಿ 1.65 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿತ್ತು. ಡಿಸೆಂಬರ್‌ನಲ್ಲಿ ಕೇಂದ್ರ ಜಿಎಸ್‌ಟಿ 32,836 ಕೋಟಿ ರು., ರಾಜ್ಯ ಜಿಎಸ್‌ಟಿ 40,499 ಕೋಟಿ ರು. ಮತ್ತು ಸಂಯೋಜಿತ ಜಿಎಸ್‌ಟಿ 47,783 ಕೋಟಿ ರು. ಸಂಗ್ರಹವಾಗಿದೆ. ಜೊತೆಗೆ ಸೆಸ್‌ನಿಂದ 11,471 ಕೋಟಿ ರು. ಬಂದಿದೆ. 2024ರ ಏಪ್ರಿಲ್‌ನಲ್ಲಿ ಅತ್ಯಧಿಕ 2.10 ಲಕ್ಷ ಕೋಟಿ ರು. ಸಂಗ್ರಹವಾಗಿದ್ದು ಇದುವರೆಗಿನ ಗರಿಷ್ಠವಾಗಿದೆ.
2 ಮುಂಚೂಣಿ ನೌಕೆ, 1 ಸಬ್‌ಮರೀನ್ ಜ.15ಕ್ಕೆ ನೌಕಾಪಡೆಗೆ ಸೇರ್ಪಡೆ
ನವದೆಹಲಿ: ದೇಶಿಯವಾಗಿ ನಿರ್ಮಿಸಲಾದ ಎರಡು ಮುಂಚೂಣಿ ಯುದ್ಧನೌಕೆಗಳು ಮತ್ತು ಒಂದು ಡೀಸೆಲ್ ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಯು ಜ.15ಕ್ಕೆ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ. ಇದು ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಮುಂಬೈನ ನೌಕಾನೆಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಕಾರ್ಯಾಚರಣೆ ಆರಂಭವಾಗಲಿದೆ. ಮುಂಚೂಣಿ ನೌಕೆಗಳಾಗಿರುವ ಕ್ಷಿಪಣಿ ನಾಶಪಡಿಸುವ ಸೂರತ್, ಸ್ಟೆಲ್ತ್ ಪ್ರಿಗೇಟ್ ನೀಲಗಿರಿ ಮತ್ತು ಸಬ್ ಮರೀನ್ ವಾಗ್‌ಶೀರ್ ಸೇರ್ಪಡೆಯಾಗಲಿದೆ. ಇವುಗಳನ್ನು ಮುಂಬೈನ ಮಡಗಾಂವ್ ಶಿಪ್ ಯಾರ್ಡ್‌ನಲ್ಲಿ ಸಂಫೂರ್ಣವಾಗಿ ದೇಶೀಯವಾಗಿ ನಿರ್ಮಿಸಲಾಗಿದೆ.
ಮಕ್ಕಳ ಶಾಲಾ ದಾಖಲಾತಿ 37 ಲಕ್ಷದಷ್ಟು ಕುಸಿತ: ಕೇಂದ್ರ
ನವದೆಹಲಿ: ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶಾದ್ಯಂತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 37 ಲಕ್ಷ ಕುಸಿದಿದೆ ಎಂದು ಶಿಕ್ಷಣ ಸಚಿವಾಲಯದ ಯುಡಿಎಸ್‌ಇ ಅಂಕಿ ಅಂಶಗಳು ಹೇಳಿವೆ.ಶಿಕ್ಷಣ ಇಲಾಖೆ ಏಕೀಕೃತ ಶಿಕ್ಷಣ ವ್ಯವಸ್ಥೆ(ಯುಪಿಎಸ್‌ಇ) ಈ ಬಗ್ಗೆ ಅಂಕಿ ಅಂಶ ಬಿಡುಗಡೆ ಮಾಡಿದೆ. ಇದರ ಪ್ರಕಾರ 2022-23ರಲ್ಲಿ 25,17 ಕೋಟಿ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಆ ಪ್ರಮಾಣ 2023-24ರಲ್ಲಿ 24.80 ಕೋಟಿಗೆ ಇಳಿಕೆಯಾಗಿದ್ದು, ಹಿಂದಿನ ವರ್ಷಕ್ಕಿಂತ 37 ಲಕ್ಷ ಕುಸಿದಿದೆ.
ಈ ಪೈಕಿ 16 ಲಕ್ಷ ಬಾಲಕಿಯರು ಶಾಲೆ ಬಿಟ್ಟಿದ್ದರೆ, 21 ಲಕ್ಷ ಬಾಲಕಿಯರು ದೂರ ಉಳಿದಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಆಂಧ್ರ ಪ್ರದೇಶದಲ್ಲಿ ರಾಜ್ಯಗಳಲ್ಲಿ ಲಭ್ಯವಿರುವ ಶಾಲೆಗಳ ಪ್ರಮಾಣವು, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಗಿಂತ ಹೆಚ್ಚಿದ್ದರೆ, ತೆಲಂಗಾಣ, ಪಂಜಾಬ್, ಪಶ್ಚಿಮ ಬಂಗಾಳ, ಹರ್ಯಾಣ, ದೆಹಲಿಯಂತಹ ರಾಜ್ಯಗಳಲ್ಲಿ ಈ ಪ್ರಮಾಣ ಕಡಿಮೆ ಎಂದು ವರದಿ ಹೇಳಿದೆ.
ರದ್ದಾದರೂ, 6691 ಕೋಟಿ ಮೌಲ್ಯದ 2000 ರು. ನೋಟು ಇನ್ನೂ ಜನರ ಬಳಿ: ಆರ್‌ಬಿಐ
ಮುಂಬೈ: ಬಳಕೆಯಿಂದ ಹಿಂದಕ್ಕೆ ಪಡೆದರೂ, 2000 ರು. ಮುಖಬೆಲೆಯ 6691 ಕೋಟಿ ರು. ಮೌಲ್ಯದ ನೋಟುಗಳು ಇನ್ನೂ ಜನರ ಬಳಿಯೇ ಉಳಿದುಕೊಂಡಿದೆ ಎಂದು ಆರ್‌ಬಿಐ ಹೇಳಿದೆ. 2023 ಮೇ 19ರಂದು ಚಲಾವಣೆಯಿಂದ 2000 ಮುಖಬೆಲೆಯ ನೋಟು ಹಿಂಪಡೆವ ವೇಳೆ ಮಾರುಕಟ್ಟೆಯಲ್ಲಿ 3.56 ಲಕ್ಷ ಕೋಟಿ ರು. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು. 2024ರ ಡಿ.31ರ ವೇಳೆಗೆ 6691 ಕೋಟಿ ರು. ಮೌಲ್ಯದ ನೋಟು ಹೊರತುಪಡಿಸಿ ಉಳಿದ ಶೇ.98.12ರಷ್ಟು ಆರ್‌ಬಿಐಗೆ ಮರಳಿದೆ ಎಂದು ಆರ್‌ಬಿಐ ಹೇಳಿದೆ. 2016ರಲ್ಲಿ ಹಳೆಯ 500 ರು. ಮತ್ತು 1000 ನೋಟುಗಳ ಅಮಾನ್ಯೀಕರಣ ವೇಳೆ ನೋಟಿನ ಕೊರತೆ ನೀಗಿಸುವ ಪರಿಚಯಿಸಿದ್ದ 2000 ಮುಖಬೆಲೆಯ ನೋಟುಗಳನ್ನು 2023ರ ಮೇನಲ್ಲಿ ಹಿಂಪಡೆಯಲು ಆರ್‌ಬಿಐ ನಿರ್ಧರಿಸಿತ್ತು.