ಸಾರಾಂಶ
ನವದೆಹಲಿ : ಚಿನ್ನ ಮತ್ತು ಚಿನ್ನಾಭರಣಗಳ ಗುಣಮಟ್ಟ ಖಚಿತಪಡಿಸಲು ನೀಡುವ ಹಾಲ್‌ಮಾರ್ಕ್ ಅನ್ನು ಬೆಳ್ಳಿ ಮತ್ತು ಬೆಳ್ಳಿಯ ಆಭರಣಗಳಿಗೂ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಸುಳಿವು ನೀಡಿದ್ದಾರೆ.ಸೋಮವಾರ ಬ್ಯೂರೋ ಆಫ್ ಸ್ಟ್ಯಾಂಡರ್ಡ್‌ನ (ಬಿಎಸ್‌ಐ)ನ 78ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜೋಶಿ, ‘ಚಿನ್ನದ ರೀತಿ ಬೆಳಿಗೂ ಹಾಲ್‌ಮಾರ್ಕ್ ನೀಡುವ ಬಗ್ಗೆ ಗ್ರಾಹಕರಿಂದ ಸಾಕಷ್ಟು ಬೇಡಿಕೆ ಇದೆ.
ಈ ಬಗ್ಗೆ ನೀವು (ಬಿಐಎಸ್) ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಕೆಲಸ ಆರಂಭಿಸಿದೆ. ಉದ್ಯಮದ ಅನಿಸಿಕೆ ಆಲಿಸಿ ಹಾಗೂ ಬಿಐಎಸ್ ನಡೆಸುವ ಕಾರ್ಯಸಾಧ್ಯತೆಯ ಮೌಲ್ಯಮಾಪನ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದರು.
ಈ ಬಗ್ಗೆ ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿ, ‘ಉದ್ಯಮ ಒಪ್ಪಿದರೆ 3ರಿಂದ 6 ತಿಂಗಳಲ್ಲಿ ಬೆಳ್ಳಿಗೆ ಹಾಲ್‌ಮಾರ್ಕ್ ಕಡ್ಡಾಯ ಮಾಡಲಾಗುವುದು’ ಎಂದರು.ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಆಗಿದ್ದರೂ, ಬೆಳ್ಳಿಗೆ ಅದು ಇನ್ನೂ ಕಡ್ಡಾಯವಲ್ಲ.