ಸಾರಾಂಶ
ಹಾಲಿ ದೇಶವ್ಯಾಪಿ ಗಣ್ಯರಿಗೆ ಬಿಗಿ ಭದ್ರತೆ ಒದಗಿಸುತ್ತಿರುವ ಎನ್‌ಎಸ್‌ಜಿ ಕಮಾಂಡೋಗಳ ಸೇವೆಯನ್ನು ಮುಂದಿನ 2 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ.
ನವದೆಹಲಿ: ಹಾಲಿ ದೇಶವ್ಯಾಪಿ ಗಣ್ಯರಿಗೆ ಬಿಗಿ ಭದ್ರತೆ ಒದಗಿಸುತ್ತಿರುವ ಎನ್‌ಎಸ್‌ಜಿ ಕಮಾಂಡೋಗಳ ಸೇವೆಯನ್ನು ಮುಂದಿನ 2 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಜೊತೆಗೆ ಗಣ್ಯರಿಗೆ ಅಗತ್ಯ ಭದ್ರತೆ ವಹಿಸುವಂತೆ ಸಿಆರ್‌ಪಿಎಫ್‌ಗೆ ಕೇಂದ್ರ ಸರ್ಕಾರ ಸೂಚಿಸಿದೆ.ಈ ಕ್ರಮದ ಮೂಲಕ ಮುಂದಿನ ದಿನಗಳಲ್ಲಿ ಎನ್‌ಎಸ್‌ಜಿ ಕಮಾಂಡೋಗಳನ್ನು ಕೇವಲ ಉಗ್ರ ನಿಗ್ರಹಕ್ಕೆ ಮಾತ್ರವೇ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಹಲವು ಗಣ್ಯರಿಗೆ ನೀಡಲಾಗುತ್ತಿದ್ದ ಎಸ್‌ಪಿಜಿ ಭದ್ರತೆಯನ್ನು ಕೂಡಾ ಹಿಂಪಡೆದು ಅದನ್ನು ಕೇವಲ ಪ್ರಧಾನಿಗಳಿಗೆ ಸೀಮಿತ ಮಾಡಲಾಗಿತ್ತು. ಹಾಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರುಖ್ ಅಬ್ದುಲ್ಲಾ, ಡಿಪಿಎಪಿ ನಾಯಕ ಗುಲಾಂ ನಬೀ ಆಜಾದ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಛತ್ತೀಸ್‌ಗಢದ ಮಾಜಿ ಸಿಎಂ ರಮಣ್‌ಸಿಂಗ್,
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಎನ್‌ಎಸ್‌ಜಿ ಕಮಾಂಡೋಗಳ ಭದ್ರತೆ ನೀಡಲಾಗಿದೆ.ಎನ್‌ಎಸ್‌ಜಿ ರಚನೆ ಮಾಡಿದ್ದೇ ಉಗ್ರ ನಿಗ್ರಹಕ್ಕಾಗಿ. ಈ ಹಿನ್ನೆಲೆಯಲ್ಲಿ ಮೂಲ ಕರ್ತವ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಸರ್ಕಾರ ಈ ಬದಲಾವಣೆ ಮಾಡಿದೆ.