ಮಂದಿರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಬೇಡಿ: ಮಾಧ್ಯಮಕ್ಕೆ ಸೂಚನೆ

| Published : Jan 21 2024, 01:32 AM IST / Updated: Jan 21 2024, 07:17 AM IST

all types of media
ಮಂದಿರ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಬೇಡಿ: ಮಾಧ್ಯಮಕ್ಕೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರದ ಕುರಿತು ಸುಳ್ಳು, ಪ್ರಚೋದಕ, ಕೋಮು ಸೌಹಾರ್ದ ಕದಡುವ ಸುದ್ದಿಗೆ ಬ್ರೇಕ್‌ ಹಾಕಲು ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನವದೆಹಲಿ: ಸೋಮವಾರ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸುಳ್ಳು, ವಿವಾದಾತ್ಮಕ ಹಾಗೂ ಪ್ರಚೋದನಕಾರಿ ವಿಷಯಗಳನ್ನು ಪ್ರಕಟಿಸದಂತೆ ಎಲ್ಲ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಸರ್ಕಾರವು ಶನಿವಾರ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸಲಹಾವಳಿ ಹೊರಡಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ‘ಇತ್ತೀಚೆಗೆ ಕೆಲವು ಪರಿಶೀಲಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವುದನ್ನು ಗಮನಿಸಲಾಗಿದೆ.

ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಪತ್ರಿಕೆಗಳು, ಖಾಸಗಿ ಟೀವಿ ಚಾನೆಲ್‌ಗಳು ಮತ್ತು ಡಿಜಿಟಲ್ ಮಾಧ್ಯಮಗಳು ಪ್ರಸಾರವಾಗುವ ಯಾವುದೇ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಸುಳ್ಳು, ಪ್ರಚೋದನಕಾರಿ, ದೇಶದಲ್ಲಿ ಕೋಮು ಸೌಹಾರ್ದತೆ ಕದಡುವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಯಾವುದೇ ವಿಷಯವನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ತಡೆಯಬೇಕು’ ಎಂದು ಸೂಚಿಸಿದೆ.