ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಭರ್ಜರಿ ಸಂಗ್ರಹ ಮುಂದುವರಿದಿದ್ದು, ಜುಲೈ ತಿಂಗಳಿನಲ್ಲಿ 1.82 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚು.

ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಭರ್ಜರಿ ಸಂಗ್ರಹ ಮುಂದುವರಿದಿದ್ದು, ಜುಲೈ ತಿಂಗಳಿನಲ್ಲಿ 1.82 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚು.

ಗುರುವಾರ ಇದರ ವರದಿ ಬಿಡುಗಡೆ ಮಾಡಿರುವ ಸರ್ಕಾರ, 1.82 ಲಕ್ಷ ಕೋಟಿ ಪೈಕಿ ಜುಲೈನಲ್ಲಿ 16,283 ಕೋಟಿ ರು. ಮರುಪಾವತಿ ಮಾಡಲಾಗಿದೆ. ಇದನ್ನು ತೆಗೆದು ನಿವ್ವಳ 1.66 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಇದು ಶೇ.14.4ರಷ್ಟು ಏರಿಕೆಯಾಗಿದೆ. ಇನ್ನು ಸ್ಥಳೀಯ ಚಟುವಟಿಕೆಗಳಿಂದ 1.34 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದು, ಆಮದು ಮೇಲಿನ ಜಿಎಸ್‌ಟಿ 48,039 ಕೋಟಿ ರು. ಸಂಗ್ರಹವಾಗಿದೆ ಎಂದು ಹೇಳಿದೆ.

2024ರ ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರು.ನಷ್ಟು ಆದ ಜಿಎಸ್‌ಟಿ ಸಂಗ್ರಹ ಈವರೆಗಿನ ದಾಖಲೆ ಆಗಿದೆ.

ವಾಣಿಜ್ಯಿಕ ಅಡುಗೆ ಅನಿಲ ದರ 6.5 ರು. ಏರಿಕೆ

ನವದೆಹಲಿ: ಅಡುಗೆ ಅನಿಲ ಮತ್ತು ವೈಮಾನಿಕ ಇಂಧನಗಳ ಬೆಲೆ ಏರಿಕೆ ಕಂಡಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ 19 ಕೇಜಿ ವಾಣಿಜ್ಯಿಕ ಅಡುಗೆ ಅನಿಲ ದರವು 6.5 ರು.ನಷ್ಟು ಏರಿಕೆಯಾಗಿದೆ. ಇದರೊಂದಿಗೆ ಹಲವು ಕಡೆ ದರ 1,652.50 ರು.ಗೆ ತಲುಪಿದೆ.ಇದೇ ವೇಳೆ, ವೈಮಾನಿಕ ಇಂಧನದ ಬೆಲೆಯು ಒಂದು ತಿಂಗಳಿನಲ್ಲಿ ಏರಡನೇ ಸಲ ಬೆಲೆ ಏರಿಕೆ ಕಂಡಿದ್ದು, ಕಿಲೋ ಲೀಟರ್‌ಗೆ 1,827.34 ರು.ನಷ್ಟು ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಮಾಸಿಕ ದರ ಪರಿಷ್ಕರಣೆಗೊಂಡ ಹಿನ್ನೆಲೆಯಲ್ಲಿ ಇಂಧನಗಳ ಬೆಲೆಯಲ್ಲಿ ಏರಿಕೆಯಾಗಿದೆ.