ಸಾರಾಂಶ
ನವೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಶೇ.15ರಷ್ಟು ಏರಿಕೆಯಾಗಿ 1.68 ಲಕ್ಷ ಕೋಟಿ ರು. ತಲುಪಿದೆ.
ಈ ವರೆಗಿನ 3ನೇ ಸಾರ್ವಕಾಲಿಕ ಗರಿಷ್ಠ ಪ್ರಮಾಣ
ನವದೆಹಲಿ: ನವೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಶೇ.15ರಷ್ಟು ಏರಿಕೆಯಾಗಿ 1.68 ಲಕ್ಷ ಕೋಟಿ ರು. ತಲುಪಿದೆ. ಇದು ಈವರೆಗಿನ 3ನೇ ಅತಿ ಗರಿಷ್ಠ ಪ್ರಮಾಣದ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಹೇಳಿದೆ.2023ರ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರು. ಸಂಗ್ರಹ ಅತ್ಯಂತ ಗರಿಷ್ಠವಾಗಿದ್ದರೆ, ಕಳೆದ ಅಕ್ಟೋಬರ್‌ನಲ್ಲಿ ಸಂಗ್ರಹವಾದ 1.72 ಲಕ್ಷ ಕೋಟಿ ರು.2ನೇ ಅತ್ಯಂತ ಗರಿಷ್ಠ ಎಂಬ ದಾಖಲೆ ಹೊಂದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯದ್ದು ಶೇ.15ರಷ್ಟು ಹೆಚ್ಚಳವಾಗಿದೆ.
ಕಳೆದ ತಿಂಗಳು ಸಂಗ್ರಹವಾಗಿರುವ 1.68 ಲಕ್ಷ ಕೋಟಿ ರು. ಜಿಎಸ್‌ಟಿಯಲ್ಲಿ ಕೇಂದ್ರದ ಪಾಲು 30,420 ಕೋಟಿ ರು., ರಾಜ್ಯದ ಪಾಲು 38,226 ಕೋಟಿ ರು. ಮತ್ತು ಐಜಿಎಸ್‌ಟಿಯ ಪಾಲು 87,009 ಕೋಟಿ ರು.ನಷ್ಟಿದೆ (ಸರಕು ಆಮದು ಮೇಲಿನ 39,198 ಕೋಟಿ ರು. ಸುಂಕ ಸೇರಿ). ಅಲ್ಲದೇ 12,274 ಕೋಟಿ ರು. ಸೆಸ್ (ಸರಕು ಆಮದು ಮೇಲಿನ 1,036 ಕೋಟಿ ರು. ಸೇರಿ) ಸಂಗ್ರಹವಾಗಿದೆ ಎಂದು ಸಚಿವಾಲಯ ಹೇಳಿದೆ.