ಒಡಕು ಮತ್ತೊಮ್ಮೆ ಬಯಲು : ‘ಇಂಡಿಯಾ’ದಿಂದ ಕಾಂಗ್ರೆಸ್‌ಗೆ ಗೇಟ್‌ಪಾಸ್‌ - ಆಪ್‌ ಎಚ್ಚರಿಕೆ!

| Published : Dec 27 2024, 12:49 AM IST / Updated: Dec 27 2024, 04:46 AM IST

ಸಾರಾಂಶ

‘ಲೋಕಸಭೆ ಚುನಾವಣೆಯಲ್ಲಿ ಆಪ್ ಜೊತೆಗಿನ ಮೈತ್ರಿ ದೊಡ್ಡ ತಪ್ಪು. ಆಪ್ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಸುಳ್ಳುಗಾರ’ ಎಂದು ಕರೆದಿದ್ದ ಕಾಂಗ್ರೆಸ್‌ ನಾಯಕ ಅಜಯ್‌ ಮಾಕನ್ ಹೇಳಿಕೆ ಬಗ್ಗೆ ಆಮ್‌ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.  

ನವದೆಹಲಿ: ‘ಲೋಕಸಭೆ ಚುನಾವಣೆಯಲ್ಲಿ ಆಪ್ ಜೊತೆಗಿನ ಮೈತ್ರಿ ದೊಡ್ಡ ತಪ್ಪು. ಆಪ್ ಸಂಚಾಲಕ ಅರವಿಂದ್‌ ಕೇಜ್ರಿವಾಲ್ ಸುಳ್ಳುಗಾರ’ ಎಂದು ಕರೆದಿದ್ದ ಕಾಂಗ್ರೆಸ್‌ ನಾಯಕ ಅಜಯ್‌ ಮಾಕನ್ ಹೇಳಿಕೆ ಬಗ್ಗೆ ಆಮ್‌ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ ಇಂಡಿಯಾ ಕೂಟದಿಂದಲೇ ಕಾಂಗ್ರೆಸ್‌ಗೆ ಗೇಟ್‌ ಪಾಸ್‌ ನೀಡುವ ಎಚ್ಚರಿಕೆ ನೀಡಿದೆ. ಇದು ಇಂಡಿಯಾ ಕೂಟದಲ್ಲಿನ ಒಡಕನ್ನು ಮತ್ತೊಮ್ಮೆ ಬಯಲು ಮಾಡಿದೆ.

ಗುರುವಾರ ಮಾತನಾಡಿದ ದೆಹಲಿ ಸಿಎಂ ಆತಿಶಿ, ‘ಕೇಜ್ರಿವಾಲ್‌ ಮತ್ತು ಆಪ್‌ ವಿರುದ್ಧ ಗಂಭೀರ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ ಅಜಯ್ ಮಾಕನ್‌ ವಿರುದ್ಧ ಕಾಂಗ್ರೆಸ್‌ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್‌ ಹೊರಹಾಕುವ ಕುರಿತು ಪ್ರಕ್ರಿಯೆ ಆರಂಭಿಸಲಾಗುವುದು. ಈ ಬಗ್ಗೆ ಇಂಡಿಯಾ ಕೂಟದ ಮೈತ್ರಿಕೂಟದ ಪಕ್ಷಗಳ ಜೊತೆ ಸಮಾಲೋಚನೆ ನಡೆಸಲಾಗುವುದು’ ಎಂದರು.

ಜೊತೆಗೆ, ದೆಹಲಿ ಚುನಾವಣೆ ಗೆಲ್ಲಲು ಬಿಜೆಪಿ ಜೊತೆ ಕಾಂಗ್ರೆಸ್‌ ಕೈಜೋಡಿಸಿದೆ ಎಂದು ಆರೋಪಿಸಿರುವ ಆತಿಷಿ, ಈ ಕುರಿತ ದೆಹಲಿ ಕಾಂಗ್ರೆಸ್‌ ನಾಯಕರ ಪಿತೂರಿಯಲ್ಲಿ, ಪಕ್ಷದ ರಾಷ್ಟ್ರೀಯ ನಾಯಕರು ಭಾಗಿಯಾಗಿಲ್ಲ ಎಂದಾದಲ್ಲಿ ದಿಲ್ಲಿ ನಾಯಕರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹ ಮಾಡಿದ್ದಾರೆ.ಇತ್ತೀಚೆಗಷ್ಟೇ ಇಂಡಿಯಾ ಕೂಟದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ನಾಯಕತ್ವದ ಬಗ್ಗೆ ಟಿಎಂಸಿ, ಸಮಾಜವಾದಿ ಪಕ್ಷ, ಆರ್‌ಜೆಡಿ ಬೆಂಬಲ ನೀಡಿವೆ. ಅದರ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ವಿರುದ್ಧ ಆಪ್‌ ಸಿಡಿದೆದ್ದಿದೆ.