ಸಾರಾಂಶ
ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್‌ಗೆ ಸಂಬಂಧಿಸಿದ ಸುಮಾರು ಎರಡೂವರೆ ದಶಕಗಳಷ್ಟು ಹಳೆಯ ಕಾನೂನು ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ.
ನವದೆಹಲಿ : ಬೆಂಗಳೂರಿನಲ್ಲಿರುವ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್‌ಗೆ ಸಂಬಂಧಿಸಿದ ಸುಮಾರು ಎರಡೂವರೆ ದಶಕಗಳಷ್ಟು ಹಳೆಯ ಕಾನೂನು ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಬೆಂಗಳೂರಿನ ಪ್ರಸಿದ್ಧ ಇಸ್ಕಾನ್ ದೇವಾಲಯವು ಬೆಂಗಳೂರಿನ ಇಸ್ಕಾನ್ ಸಮುದಾಯಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನ ಇಸ್ಕಾನ್ ದೇಗುಲ ಮತ್ತು ಶೈಕ್ಷಣಿಕ ಕಾಂಪ್ಲೆಕ್ಸ್ ಮೇಲಿನ ನಿಯಂತ್ರಣವನ್ನು ಮುಂಬೈನ ಇಸ್ಕಾನ್‌ಗೆ ನೀಡಿ ಕರ್ನಾಟಕ ಹೈಕೋರ್ಟ್ 2011ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸಮುದಾಯವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾ.ಎ.ಎಸ್.ಓಕಾ ಮತ್ತು ನ್ಯಾ.ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಇಸ್ಕಾನ್ ಬೆಂಗಳೂರು, ಕರ್ನಾಟಕದಲ್ಲಿ ನೋಂದಾಯಿತ ಸೊಸೈಟಿಯು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿದ್ದು, ಹಲವು ದಶಕಗಳಿಂದ ದೇವಸ್ಥಾನದ ನಿರ್ವಹಣೆ ನಡೆಸುತ್ತಿದೆ. ಆದರೆ, ಇಸ್ಕಾನ್ ಮುಂಬೈ ಸೊಸೈಟಿಯು ರಾಷ್ಟ್ರೀಯ ಸೊಸೈಟಿಗಳ ನೋಂದಣಿ ಕಾಯ್ದೆ 1860 ಮತ್ತು ಬಾಂಬೆ ಸಾರ್ವಜನಿಕ ಟ್ರಸ್ಟ್ ಕಾಯ್ದೆ-1950ರಡಿ ನೋಂದಣಿಯಾಗಿದೆ. ಮುಂಬೈ ಇಸ್ಕಾನ್ ಸೊಸೈಟಿಯು ಬೆಂಗಳೂರು ಇಸ್ಕಾನ್ ಅನ್ನು ತನ್ನ ಶಾಖೆ ಎಂದು ವಾದಿಸಿತ್ತು. ಆದರೆ, ಬೆಂಗಳೂರು ಇಸ್ಕಾನ್ ಮಾತ್ರ ತನ್ನನ್ನು ತಾನು ಸ್ವತಂತ್ರ ಸಂಸ್ಥೆ ಎಂದು ಹೇಳಿಕೊಂಡು, ಬೆಂಗಳೂರಿನ ಇಸ್ಕಾನ್ ದೇವಾಲಯಗಳನ್ನು ಸ್ವತಂತ್ರವಾಗಿ ನಿರ್ವಹಣೆ ಮಾಡಿಕೊಂಡು ಹೋಗುತ್ತಿತ್ತು.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧು ಪಂಡಿತ್ ದಾಸ್ ಅವರು, ಈ ತೀರ್ಪು ನಾವು ಹಿಂದಿನಿಂದಲೂ ಮಾಡಿಕೊಂಡು ಬಂದ ವಾದವನ್ನು ಒಪ್ಪಿದಂತಾಗಿದೆ ಎಂದು ಹೇಳಿದ್ದಾರೆ.
ಈ ತೀರ್ಪು ದೇಶಾದ್ಯಂತ 24 ದೇವಸ್ಥಾನಗಳ ನಿರ್ವಹಣೆ ಮತ್ತು ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಇಸ್ಕಾಂ ಬೆಂಗಳೂರಿನ ಅಕ್ಷಯ ಪಾತ್ರೆ ಫೌಂಡೇಷನ್‌ನ ಕಾರ್ಯಾಚರಣೆಯನ್ನೂ ಬಲಪಡಿಸಲಿದೆ ಎಂದು ಇಸ್ಕಾನ್ ಪರ ವಕೀಲ ವಿಕಾಸ್ ಸಿಂಗ್ ಜಂಗ್ರ ತಿಳಿಸಿದ್ದಾರೆ.
ಯಶಸ್ವಿ ಹೋರಾಟ..
25 ವರ್ಷದ ಹೋರಾಟ ನ್ಯಾಯದ ಪರವಾಗಿ ಯಶಸ್ವಿಯಾಗಿ ಮುಗಿದಿದೆ. ಬೆಂಗಳೂರು ದೇಗುಲ ನಿರ್ಮಾಣಕ್ಕಾಗಿ 1998ರಲ್ಲಿ ಹರೇ ಕೃಷ್ಣ ಗಿರಿಯಲ್ಲಿ ಬಿಡಿಎಯಿಂದ ಹಂಚಿಕೆ ಆಗಿದ್ದ ಜಾಗ, ಬೆಂಗಳೂರಿನ ಭಕ್ತರಿಂದ ನಿಧಿ ಸಂಗ್ರಹಿಸಿ ಕಟ್ಟಿದ ದೇಗುಲ ಆಸ್ತಿಯುಇಸ್ಕಾನ್ ಬೆಂಗಳೂರು ಸೊಸೈಟಿಗೆ ಸೇರಿದೆ.
- ಮಧು ಪಂಡಿತ ದಾಸ, ಅಧ್ಯಕ್ಷರು, ಇಸ್ಕಾನ್ ಬೆಂಗಳೂರು