ಲೋಕಸಭಾ ಚುನಾವಣೆ: ಮಾಜಿ ಸಿಎಂ ವರ್ಸಸ್‌ ಮಾಜಿ ಸಿಎಂ ಮಗ!

| Published : Apr 03 2024, 01:30 AM IST / Updated: Apr 03 2024, 05:52 AM IST

India Election

ಸಾರಾಂಶ

ಏಪ್ರಿಲ್ 19 ರಂದು ಚುನಾವಣೆ ನಡೆಯಲಿರುವ ಉತ್ತರಾಖಂಡದ ಹರಿದ್ವಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಏರ್ಪಟ್ಟಿದೆ.

ಹರಿದ್ವಾರ : ಏಪ್ರಿಲ್ 19 ರಂದು ಚುನಾವಣೆ ನಡೆಯಲಿರುವ ಉತ್ತರಾಖಂಡದ ಹರಿದ್ವಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಏರ್ಪಟ್ಟಿದೆ. ಮಾಜಿ ಸಿಎಂ ಮತ್ತು ಬಿಜೆಪಿ ಅಭ್ಯರ್ಥಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕಾಂಗ್ರೆಸ್‌ನ ವೀರೇಂದ್ರ ರಾವತ್ ವಿರುದ್ಧ ಸ್ಪರ್ಧಿಸಿದ್ದಾರೆ. 

ಬಿಜೆಪಿಯು ತನ್ನ ಎರಡು ಬಾರಿ ಹಾಲಿ ಸಂಸದ ಮತ್ತು ಮಾಜಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಈ ಸಲ ಟಿಕೆಟ್‌ ನಿರಾಕರಿಸಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಅವಕಾಶ ನೀಡಿದೆ. ಕಾಂಗ್ರೆಸ್ ಕೂಡ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಅಂಬರೀಶ್ ಕುಮಾರ್ ಅವರನ್ನು ಬದಲಿಸಿದೆ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರ ಮಗ, ಹೊಸ ಅಭ್ಯರ್ಥಿ ವೀರೇಂದ್ರ ರಾವತ್ ಅವರನ್ನು ಕಣಕ್ಕಿಳಿಸಿದೆ. 

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿಗೆ ಏರ್ಪಟ್ಟಿದೆ. ಬಿಎಸ್ಪಿ ಮುಸ್ಲಿಂ ಅಭ್ಯರ್ಥಿ ಜಮೀಲ್‌ ಅಹ್ಮದ್‌ ಖಾಸ್ಮಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ ಮತಗಳಿಗೆ ಕತ್ತರು ಹಾಕುವ ಸಾಧ್ಯತೆ ಇದೆ. ಇನ್ನು ಉಳಿದ ಪಕ್ಷಗಳು, ಸ್ವತಂತ್ರರು ಕಣದಲ್ಲಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ.

ರಾವತ್‌ಗಳ ಕದನ:ತ್ರಿವೇಂದ್ರ ರಾವತ್‌ ಈ ಸಲದ ಬಿಜೆಪಿ ಆಯ್ಕೆ. 2017ರಿಂದ 2021 ರವರೆಗೆ ಉತ್ತರಾಖಂಡದ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದರು. ಇದಕ್ಕೂ ಮುನ್ನ ರಾವತ್ 1979 ರಿಂದ 2002 ರವರೆಗೆ ಆರ್‌ಎಸ್‌ಎಸ್ ಸದಸ್ಯರಾಗಿದ್ದರು. ಅವರು 2000 ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ನಂತರ 2002ರಲ್ಲಿ ಮೊದಲ ವಿಧಾನಸಭೆಯಲ್ಲಿ ದೋಯಿವಾಲಾದಿಂದ ಶಾಸಕರಾಗಿ ಆಯ್ಕೆಯಾದರು. ಅವರು 2017ರಲ್ಲೂ ದೋಯಿವಾಲಾ ಸ್ಥಾನವನ್ನು ಗೆದ್ದರು ಮತ್ತು ಬಿಜೆಪಿ ಬಹುಮತ ಗಳಿಸಿದ ಕಾರಣ ಮುಖ್ಯಮಂತ್ರಿಯಾಗಿ ಹೆಸರಿಸಲ್ಪಟ್ಟರು. ಇನ್ನು ಈ ಮುಂಚೆ ಹರಿದ್ವಾರದ ಸಂಸದರಾಗಿದ್ದ ಮಾಜಿ ಸಿಎಂ ಹರೀಶ್ ರಾವತ್‌ ಅವರ ಮಗ ವೀರೇಂದ್ರ ರಾವತ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಹರೀಶ್‌ ಕೂಡ ತಮ್ಮ ಮಗನನ್ನು ಗೆಲ್ಲಿಸಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ. ಹೀಗಾಗಿ ಕದನ ಕಣ ಸಹಜವಾಗೇ ಕುತೂಹಲ ಕೆರಳಿಸಿದೆ.

ಹರಿದ್ವಾರ ಲೋಕಸಭಾ ಕ್ಷೇತ್ರದ ಇತಿಹಾಸ:ಬಿಜೆಪಿ 2014 ಮತ್ತು 2019 ರಲ್ಲಿ ಹರಿದ್ವಾರ ಲೋಕಸಭಾ ಸ್ಥಾನವನ್ನು ಸತತವಾಗಿ ಗೆದ್ದಿದೆ, ಇದರಲ್ಲಿ ರಮೇಶ್ ಪೋಖ್ರಿಯಾಲ್ ಆಯಾ ವರ್ಷಗಳಲ್ಲಿ ಕಾಂಗ್ರೆಸ್‌ನ ರೇಣುಕಾ ರಾವತ್ ಮತ್ತು ಅಂಬರೀಶ್ ಕುಮಾರ್ ಅವರನ್ನು ಸೋಲಿಸಿದರು. 2009ರಲ್ಲಿ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಬಿಜೆಪಿಯ ಯತೀಂದ್ರಾನಂದ ಗಿರಿ ಅವರನ್ನು ಸೋಲಿಸಿದ್ದರು.