ಹರ್ಯಾಣ: ಸೈನಿ ಸರ್ಕಾರಕ್ಕೆ ವಿಶ್ವಾಸಮತ

| Published : Mar 14 2024, 02:04 AM IST

ಸಾರಾಂಶ

ವಿಪ್‌ ಉಲ್ಲಂಘಿಸಿ ಬಿಜೆಪಿಗೆ 5 ಜೆಜೆಪಿ ಶಾಸಕರ ಬೆಂಬಲ ದೊರೆತ ಹಿನ್ನೆಲೆಯಲ್ಲಿ ಜೆಜೆಪಿ ಇಭ್ಭಾಗ ಹೆಚ್ಚೂ ಕಡಿಮೆ ಖಚಿತ ಎನ್ನಲಾಗಿದೆ.

ಪಿಟಿಐ ಚಂಡೀಗಢಹರ್ಯಾಣದ ನಯಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ವಿಶ್ವಾಸ ನಿರ್ಣಯ ಗೆದ್ದಿದೆ. ಇದರ ಜತೆಗೆ ತನ್ನ ಈ ಹಿಂದಿನ ಮಿತ್ರ ಪಕ್ಷವಾದ ಜನನಾಯಕ ಜನತಾ ಪಕ್ಷವನ್ನು (ಜೆಜೆಪಿ) ಹೆಚ್ಚೂಕಡಿಮೆ ಇಬ್ಭಾಗ ಮಾಡುವಲ್ಲಿ ಬಿಜೆಪಿ ಯಶ ಕಂಡಿದೆ.ಹಿಂದಿನ ಸಿಎಂ ಮನೋಹರಲಾಲ್‌ ಖಟ್ಟರ್ ರಾಜೀನಾಮೆ ನೀಡಿದ ಕಾರಣ ಮಂಗಳವಾರ ಸೈನಿ ಅಧಿಕಾರಕ್ಕೆ ಬಂದಿದ್ದರು. ಹೋಗಾಗಿ ಅವರು ಬುಧವಾರ ವಿಶ್ವಾಸಮತ ಕೋರಿದರು. ವಿಶ್ವಾಸಮತ ಯಾಚನೆಯ ವೇಳೆ ಸದನಕ್ಕೆ ಗೈರುಹಾಜರಾಗುವಂತೆ ಅಭಯ್‌ ಚೌಟಾಲಾ ಅವರ ಜೆಜೆಪಿ ತನ್ನ 10 ಶಾಸಕರಿಗೆ ವಿಪ್ ಜಾರಿ ಮಾಡಿತ್ತು. ಆದಾಗ್ಯೂ, ವಿಶ್ವಾಸ ಮತದ ವಿಷಯ ಕೈಗೆತ್ತಿಕೊಂಡಾಗ, ಅದರ 5 ಶಾಸಕರು ಸದನದಿಂದ ನಿರ್ಗಮಿಸಿದರು. ಬಿಜೆಪಿ ಬೆಂಬಲಿಸುವ 5 ಶಾಸಕರು ಸದನದಲ್ಲೇ ಉಳಿದರು. ಇದು ಜೆಜೆಪಿ ಒಡಕು ಬಯಲು ಮಾಡಿತು.90 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ, ಬಿಜೆಪಿ 41 ಶಾಸಕರನ್ನು ಹೊಂದಿದೆ ಮತ್ತು ಇದು 7 ಸ್ವತಂತ್ರರಲ್ಲಿ 6 ಮತ್ತು ಹರಿಯಾಣದ ಲೋಕಹಿತ್ ಪಕ್ಷದ ಏಕೈಕ ಶಾಸಕ ಗೋಪಾಲ್ ಕಾಂಡಾ ಅವರ ಬೆಂಬಲವನ್ನು ಸಹ ಹೊಂದಿದೆ. ಸದನದಲ್ಲಿ ಜೆಜೆಪಿ 5 ಬಂಡುಕೋರರು ಸೇರಿ 10 ಶಾಸಕರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದ್ದರೆ ಭಾರತೀಯ ರಾಷ್ಟ್ರೀಯ ಲೋಕದಳ ಒಬ್ಬರನ್ನು ಹೊಂದಿದೆ.