ಸಾರಾಂಶ
ಕುರುಕ್ಷೇತ್ರ: ಹರ್ಯಾಣ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಧಿಕಾರಕ್ಕೆ ಬರಕಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡು ಕರ್ನಾಟಕದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ‘ತುಷ್ಟೀಕರಣದ ಭರದಲ್ಲಿ ಕರ್ನಾಟಕದಲ್ಲಿ ಗಣೇಶೋತ್ಸವ ಆಚರಣೆಗೂ ಅಡ್ಡಿಪಡಿಸಲಾಗುತ್ತಿದೆ’ ಎಂದು ಇತ್ತೀಚಿನ ನಾಗಮಂಗಲ ಹಿಂಸೆ ಹಾಗೂ ಬೆಂಗಳೂರಿನ ಪ್ರತಿಭಟನೆ ಘಟನೆಗಳನ್ನು ಉದಾಹರಿಸಿದ್ದಾರೆ.
ಇದೇ ವೇಳೆ, ‘ಭ್ರಷ್ಟಾಚಾರ ಎಸಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕರ್ನಾಟಕ ಹಾಗೂ ತೆಲಂಗಾಣ ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ’ ಎಂದ ಅವರು, ‘ಹರ್ಯಾಣದಲ್ಲಿ ಬೆಂಬಲ ಬೆಲೆ ಕಾಯ್ದೆಗೆ ಆಗ್ರಹಿಸುವ ಕಾಂಗ್ರೆಸ್ ಕರ್ನಾಟಕದಲ್ಲಿ ಎಷ್ಟು ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ?’ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಬೇಕು ಎಂದು ಹರ್ಯಾಣದ ಜನರಿಗೆ ಕೋರಿರುವ ಅವರು, ರಾಜ್ಯದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯ ಸಾಧಿಸುವುದು ನಿಶ್ಚಿತ ಎಂದಿದ್ದಾರೆ.
ಗಣೇಶೋತ್ಸವಕ್ಕೂ ಅಡ್ಡಿ: ಕುರುಕ್ಷೇತ್ರದಲ್ಲಿ ಶನಿವಾರ ಸಂಜೆ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಗಣೇಶೋತ್ಸವದ ಮೆರವಣಿಗೆ ವೇಳೆ ನಡೆದ ಗಲಭೆಗಳ ಬಗ್ಗೆ ಉಲ್ಲೇಖಿಸಿದರು. ‘ತುಷ್ಟೀಕರಣವೇ (ಒಂದು ಕೋಮಿನ ಓಲೈಕೆ ರಾಜಕಾರಣವೇ) ಕಾಂಗ್ರೆಸ್‌ನ ಆದ್ಯತೆ ಆಗಿದೆ. ಅಲ್ಲಿ ಗಣೇಶನನ್ನೂ ಪೊಲೀಸ್ ಗಾಡಿ ಒಳಗೆ ಕೂಡಿ ಹಾಕಿ ಕೊಂಡೊಯ್ಯಲಾಗುತ್ತಿದೆ. ಇಡೀ ದೇಶ ಸಂಭ್ರಮದಿಂದ ವಿಘ್ನ ವಿನಾಶಕನ ಆಚರಣೆಯಲ್ಲಿ ತೊಡಗಿದ್ದರೆ, ಕರ್ನಾಟಕದಲ್ಲಿ ವಿಘ್ನಹರ್ತನ (ಗಣೇಶನ) ಪೂಜೆಯಲ್ಲೂ ವಿಘ್ನ ಸೃಷ್ಟಿಸಲಾಗುತ್ತಿದೆ’ ಎಂದರು. ಈ ಮೂಲಕ ನಾಗಮಂಗಲದಲ್ಲಿ ಗಣೇಶೋತ್ಸವ ವೇಳೆ ನಡೆದ ಗಲಭೆ ಹಾಗೂ ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ, ಪ್ರತಿಭಟನಾಕಾರರು ತಂದಿದ್ದ ಗಣೇಶನ ಮೂರ್ತಿಯನ್ನು ಪೊಲೀಸರು ತಮ್ಮ ವ್ಯಾನ್‌ನಲ್ಲಿ ಹಾಕಿಕೊಂಡು ಹೋಗಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ಕರ್ನಾಟಕ ಜನತೆಗೆ ಪಶ್ಚಾತ್ತಾಪ:
ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜನ ಅವರನ್ನು ಚುನಾಯಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದ ಮೋದಿ, ‘ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಹಣದುಬ್ಬರ ಹಾಗೂ ಭ್ರಷ್ಟಾಚಾರ ಉತ್ತುಂಗದಲ್ಲಿದೆ. ಅಲ್ಲಿ ಜನರಿಗೆ ಉದ್ಯೋಗವಿಲ್ಲ. ವಿಕಾಸ ಕುಂಠಿತವಾಗಿದೆ’ ಎಂದು ಆರೋಪಿಸಿದರು. ‘ಒಳ್ಳೆ ರಾಜ್ಯಗಳನ್ನು ಹಾಳು ಮಾಡುವುದು ಹೇಗೆ ಎಂದು ಕಾಂಗ್ರೆಸ್ ತೋರಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.
ಎಷ್ಟು ಬೆಂಬಲ ಬೆಲೆ ನೀಡಿದ್ದೀರಿ?:
‘ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ಕಾಯ್ದೆ ರೂಪಿಸಿ ಎಂದು ಕಾಂಗ್ರೆಸ್ ದೇಶದೆಲ್ಲೆಡೆ ಹುಯಿಲೆಬ್ಬಿಸುತ್ತಿದೆ. ಹಾಗಿದ್ದರೆ ಕಾಂಗ್ರೆಸ್ ಆಡಳಿತ ಇರುವ ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಎಷ್ಟು ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ?’ ಎಂದು ಮೋದಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವನ್ನು ‘ಅರ್ಬನ್ ನಕ್ಸಲ್’ ಎಂದ ಮೋದಿ, ‘ಇಂಥ ಅಪ್ರಾಮಾಣಿಕ ಹಾಗೂ ಮೋಸಗಾರ ಪಕ್ಷ ಯಾವುದೂ ಇಲ್ಲ. ಪಂಜಾಬ್‌ನಲ್ಲಿ ಚುನಾವಣೆ ಗೆಲ್ಲಲು ಜನರ ಖಜಾನೆ ಖಾಲಿ ಮಾಡಿದ್ದಾರೆ. ರಾಜ್ಯ ಹಾಗೂ ಮಕ್ಕಳ ಭವಿಷ್ಯದ ಸುರಕ್ಷತೆಗಾಗಿ ಇಂತಹ ಪಕ್ಷವನ್ನು ಸರ್ಕಾರದ ಹತ್ತಿರವೂ ಸುಳಿಯಲು ಬಿಡಬೇಡಿ’ ಎಂದು ಹರ್ಯಾಣದ ಜನತೆಗೆ ಎಚ್ಚರಿಸಿದರು.
ಆದರೆ ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡು 100 ದಿನ ಪೂರ್ಣವಾಗುವ ಮೊದಲೇ 15 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತದ ಯೋಜನೆಗಳನ್ನು ಕೈಗೊಂಡಿದೆ ಎಂದ ಮೋದಿ, ಅ.5ರಂದು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಹ್ಯಾಟ್ರಿಕ್ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.