ಸಾರಾಂಶ
‘ಬಾಂಗ್ಲಾದೇಶದ ಅಸ್ಥಿರತೆ ಕಾರಣ ಸೋಮವಾರ ಸಂಜೆ ದಿಲ್ಲಿಗೆ ಬಂದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಅವರಿಗೆ ಸಮಯ ನೀಡಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.
ಪಿಟಿಐ ನವದೆಹಲಿ
‘ಬಾಂಗ್ಲಾದೇಶದ ಅಸ್ಥಿರತೆ ಕಾರಣ ಸೋಮವಾರ ಸಂಜೆ ದಿಲ್ಲಿಗೆ ಬಂದ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಮತ್ತು ಮುಂದಿನ ಕ್ರಮವನ್ನು ನಿರ್ಧರಿಸಲು ಅವರಿಗೆ ಸಮಯ ನೀಡಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ದೇಶದ ಹಿತದೃಷ್ಟಿಯಿಂದ ಬಾಂಗ್ಲಾ ವಿಚಾರವಾಗಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಪಕ್ಷಗಳ ನಾಯಕರು ಸರ್ಕಾರಕ್ಕೆ ಭರವಸೆ ನೀಡಿದ್ದಾರೆ.ಸಂಸತ್ ಭವನದಲ್ಲಿ ಬಾಂಗ್ಲಾ ವಿದ್ಯಮಾನದ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಜೈಶಂಕರ್, ‘ಹಸೀನಾ ಭಾರತಕ್ಕೆ ಆಗಮಿಸಿ ಇನ್ನೂ 24 ಗಂಟೆಗಳಾಗಿಲ್ಲ. ಅವರು ಆಘಾತಕ್ಕೊಳಗಾಗಿದ್ದಾರೆ. ತಮ್ಮ ಭವಿಷ್ಯದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅವರು ನಿರ್ಧರಿಸಲಿದ್ದಾರೆ. ಆದರೆ ಸರ್ಕಾರವು ಚೇತರಿಸಿಕೊಳ್ಳಲು ಸಮಯವನ್ನು ನೀಡುತ್ತಿದೆ’ ಎಂದರು.ಪಾಕ್ ಕೈವಾಡ ತಳ್ಳಿಹಾಕಲಾಗದು: ಇದೇ ವೇಳೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ನಾಯಕರು ಬಾಂಗ್ಲಾ ಅಸ್ಥಿರತೆ ಹಿಂದೆ ವಿದೇಶಿ (ಪಾಕ್) ಕೈವಾಡವಿರಬಹುದು ಎಂದು ಶಂಕಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ವಿದೇಶಿ ಸರ್ಕಾರಗಳ ಪಾತ್ರವನ್ನು ತಳ್ಳಿಹಾಕಲಿಲ್ಲ. ‘ಯಾವ ಸಾಧ್ಯತೆಯನ್ನೂ ತಳ್ಳಿಹಾಕಲಾಗದು. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಡೆದಿದೆ. ಢಾಕಾದಲ್ಲಿನ ಪಾಕ್ ರಾಯಭಾರಿ ತಮ್ಮ ಟ್ವೀಟರ್ ಡಿಪಿಯಲ್ಲಿ ಬಾಂಗ್ಲಾ ಹೋರಾಟ ಬೆಂಬಲಿಸುವ ಫೋಟೋ ಹಾಕಿಕೊಂಡಿದ್ದಾರೆ’ ಎಂದು ಸೂಚ್ಯವಾಗಿ ನುಡಿದರು.ಭಾರತೀಯರ ಸುರಕ್ಷತೆ: ‘ಬಾಂಗ್ಲಾದೇಶದಲ್ಲಿರುವ 10,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಬಾಂಗ್ಲಾದೇಶ ಸೇನೆಯೊಂದಿಗೆ ಸಂಪರ್ಕದಲ್ಲಿದೆ. ಅಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇರಿಸಿದೆ’ ಎಂದರು.==
ರಫೇಲ್ ರಕ್ಷಣೆಯಲ್ಲಿ ಭಾರತಕ್ಕೆ ಬಂದ ಹಸೀನಾನವದೆಹಲಿ/ಢಾಕಾ: ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಭಾರತದಲ್ಲಿ ತಾತ್ಕಾಲಿಕ ಆಶ್ರಯ ಕೋರಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾರನ್ನು ಯುದ್ಧ ವಿಮಾನ ಮತ್ತು ರೆಡಾರ್ ಕಣ್ಗಾವಲಿನಲ್ಲಿ ದೆಹಲಿಗೆ ಕರೆ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಆಶ್ರಯ ನೀಡಲು ಭಾರತ ಅನುಮತಿ ನೀಡಿದ ಬೆನ್ನಲ್ಲೇ ಹಸೀನಾ ಸೇನಾ ವಿಮಾನದಲ್ಲಿ ಭಾರತದತ್ತ ಪ್ರಯಾಣ ಕೈಗೊಂಡಿದ್ದರು. ಈ ವೇಳೆ ಹಸೀನಾ ಅವರು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ರಕ್ಷಣೆ ಒದಗಿಸುವ ಸಲುವಾಗಿ ಪಶ್ಚಿಮ ಬಂಗಾಳದ ಹಾಸೀಮಾರಾ ವಾಯುನೆಲೆಯ ಎರಡು ರಫೇಲ್ ಯುದ್ಧವಿಮಾನಗಳು ಅದರ ಮೇಲೆ ನಿಗಾ ಇಟ್ಟು ಹಿಂಬಾಲಿಸಿದವು. ಈ ವೇಳೆ ಹಸೀನಾ ವಿಮಾನದ ಮೇಲೆ ರಡಾರ್ ಕಣ್ಗಾವಲನ್ನೂ ಇಡಲಾಗಿತ್ತು. ಜೊತೆಗೆ ವಾಯುಪಡೆ ಮುಖ್ಯಸ್ಥ ವಿ.ಆರ್ ಚೌಧರಿ ಮತ್ತು ಸೇನಾ ಪಡೆ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಇಡೀ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
==ಶಾಂತಿ ಪುನಃ ಸ್ಥಾಪನೆಗೆ ಬಾಂಗ್ಲಾ ಸೇನೆಗೆ ಭಾರತ ಆಗ್ರಹ
ನವದೆಹಲಿ: ಹಿಂಸಾಚಾರದಿಂದ ನಲುಗುತ್ತಿರುವ ಬಾಂಗ್ಲಾದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಭಾರತ ಸರ್ಕಾರವು ಬಾಂಗ್ಲಾ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಸ್- ಜಮಾನ್ ರ ಬಳಿ ಮನವಿ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಈಗಾಗಲೇ ಮೋದಿ ಸರ್ಕಾರ, ಬಾಂಗ್ಲಾ ಸೇನಾ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದ್ದು, ಶೇಖ್ ಹಸೀನಾ ಪದಚ್ಯುತಿ ಬಳಿಕ ಬಾಂಗ್ಲಾದಲ್ಲಿ ಆರಂಭವಾಗಿರುವ ಗಲಭೆಯಿಂದಾಗಿ ದೇಶವನ್ನು ಸಹಜ ಸ್ಥಿತಿಗೆ ಮರಳಲು ಬೇಕಾಗುವ ನೆರವನ್ನು ನೀಡುವುದಾಗಿ ಭರವಸೆಯನ್ನು ನೀಡಿದೆ ಎನ್ನಲಾಗಿದೆ.