ರಾಜ್ಯದ ಯುವ ಬ್ರಾಹ್ಮಣ ದಂಪತಿಗಳು 4 ಮಕ್ಕಳ ಹೆತ್ತರೆ 1 ಲಕ್ಷ ಗಿಫ್ಟ್ : ಎಂಪಿ ನಾಯಕ

| Published : Jan 14 2025, 01:00 AM IST / Updated: Jan 14 2025, 04:19 AM IST

ಸಾರಾಂಶ

 ರಾಜ್ಯದ ಯುವ ಬ್ರಾಹ್ಮಣ ದಂಪತಿಗಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ, ಅವರಿಗೆ ಒಂದು ಲಕ್ಷ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಮಧ್ಯಪ್ರದೇಶದ ಸಚಿವ, ಪರಶುರಾಮ್ ಕಲ್ಯಾಣ ಮಂಡಳಿಯ ಅಧ್ಯಕ್ಷ ಪಂಡಿತ್‌ ವಿಷ್ಣು ರಾಜೋರಿಯಾ ಹೇಳಿದ್ದಾರೆ.

ಭೋಪಾಲ್: ರಾಜ್ಯದ ಯುವ ಬ್ರಾಹ್ಮಣ ದಂಪತಿಗಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ, ಅವರಿಗೆ ಒಂದು ಲಕ್ಷ ರು. ಆರ್ಥಿಕ ನೆರವು ನೀಡಲಾಗುವುದು ಎಂದು ಮಧ್ಯಪ್ರದೇಶದ ಸಚಿವ, ಪರಶುರಾಮ್ ಕಲ್ಯಾಣ ಮಂಡಳಿಯ ಅಧ್ಯಕ್ಷ ಪಂಡಿತ್‌ ವಿಷ್ಣು ರಾಜೋರಿಯಾ ಹೇಳಿದ್ದಾರೆ.

ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಷ್ಣು,‘ನಾವು ನಮ್ಮ ಕುಟುಂಬಗಳ ಮೇಲೆ ಹೆಚ್ಚು ಕೇಂದ್ರೀಕರಿಸುವುದನ್ನು ನಿಲ್ಲಿಸಿದ್ದೇವೆ ಎನ್ನುವ ಕಾರಣಕ್ಕೆ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚಿದೆ. ನಾವು ಹಿರಿಯರಿಂದ ಹೆಚ್ಚಿದನ್ನು ನಿರೀಕ್ಷಿಸಲು ಸಾಧ್ಯವಿಲ್ಲ, ಯುವ ದಂಪತಿಗಳಿಂದ ಹೆಚ್ಚಿನ ಭರವಸೆ ಹೊಂದಿದ್ದೇನೆ, ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಲು ನೀವು ಹೊಣೆಗಾರರು. ಯುವ ದಂಪತಿಗಳು ಒಂದು ಮಗು ಸಾಕು ಎನ್ನುತ್ತಾರೆ.ಆದರೆ ಇದು ಸಮಸ್ಯೆಗೆ ಕಾರಣವಾಗಿದೆ. ಕನಿಷ್ಟ ನೀವು ನಾಲ್ಕು ಮಕ್ಕಳನ್ನು ಹೊಂದುವಂತೆ ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ಕಲ್ಯಾಣ ಮಂಡಳಿಯ ಅಧ್ಯಕ್ಷನಾಗಿರಲಿ, ಇಲ್ಲದಿರಲಿ, ನಾಲ್ಕು ಮಕ್ಕಳನ್ನು ಹೆತ್ತವರಿಗೆ ಮಂಡಳಿ ವತಿಯಿಂದ 1 ಲಕ್ಷ ರು. ನೀಡುತ್ತೇವೆ. ಶಿಕ್ಷಣ ಈಗ ದುಬಾರಿಯಾಗಿದೆ ಅದನ್ನು ಹೇಗಾದರೂ ನಿರ್ವಹಿಸಿ. ಆದರೆ ಜನ್ಮ ನೀಡುವಲ್ಲಿ ವಿಳಂಬ ಮಾಡಬೇಡಿ. ಇಲ್ಲದಿದ್ದರೆ ಧರ್ಮದ್ರೋಹಿಗಳು ದೇಶವನ್ನು ವಶಪಡಿಸಿಕೊಳ್ಳುತ್ತಾರೆ’ ಎಂದಿದ್ದಾರೆ.