ಸಾರಾಂಶ
ನವದೆಹಲಿ: ಇಲ್ಲಿನ ಐಎಎಸ್ ತರಬೇತಿ ಕೇಂದ್ರಕ್ಕೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಶುಕ್ರವಾರ ಪ್ರಕರಣದ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಪೊಲೀಸರನ್ನು ಹಾಗೂ ದೆಹಲಿ ಮಹಾನಗರ ಪಾಲಿಕೆಯನ್ನು ದಿಲ್ಲಿ ಹೈಕೊರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿತು. ವಿದ್ಯಾರ್ಥಿಗಳು ಹೇಗೆ ಹೊರ ಬರಲು ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ತಿಳಿದುಕೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಕೊಂಡಿಲ್ಲ. ಈ ಪ್ರದೇಶದಲ್ಲಿ ಚರಂಡಿಗಳು ಕಾರ್ಯನಿರ್ವಹಿಸುತ್ತಿಲ್ಲವೆಂದು ಮಹಾನಗರ ಪಾಲಿಕೆ ಅಧಿಕಾರಿಗಳು ಆಯುಕ್ತರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಪೀಠ ಪಾಲಿಕೆಯನ್ನು ಪ್ರಶ್ನಿಸಿತು.
ನೀರಿನಲ್ಲಿ ಕಾರು ಚಾಲನೆ ಮಾಡಿದ ಚಾಲಕನ ಮೇಲೆ ಕೇಸು ಹಾಕಿದ್ದ ಪೊಲೀಸರ ಮೇಲೆ ಆಕ್ರೋಶಗೊಂಡ ಪೀಠ, ಸದ್ಯ ಒಳನುಗ್ಗಿದ್ದ ನೀರಿನ ಮೇಲೆ ನೀವು ಕೇಸು ಹಾಕಿಲ್ಲ ಎಂದು ವ್ಯಂಗ್ಯವಾಡಿತು.