ಸಾರಾಂಶ
ನವದೆಹಲಿ : ಕೋವಿಡ್-19 ಅಲೆ ಜಗತ್ತನ್ನು ಅತಿಹೆಚ್ಚಾಗಿ ಬಾಧಿಸಿದ 2020ನೇ ಇಸ್ವಿಯಲ್ಲಿ ಭಾರತದಲ್ಲಿ ಪ್ರತಿ ವರ್ಷಕ್ಕಿಂತ 11.9 ಲಕ್ಷ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಬ್ರಿಟನ್ನಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ವರದಿಯೊಂದು ಹೇಳಿದೆ. ಅಂದರೆ ಭಾರತದಲ್ಲಿ ಕೋವಿಡ್‌ನಿಂದ 11.9 ಲಕ್ಷ ಸಾವುಗಳು ಸಂಭವಿಸಿವೆ ಎಂಬರ್ಥದಲ್ಲಿ ಈ ವರದಿಯಿದೆ.
ಕೋವಿಡ್‌ನಿಂದ ಭಾರತದಲ್ಲಿ 1.5 ಲಕ್ಷ ಸಾವುಗಳು ಸಂಭವಿಸಿವೆ ಎಂದು ಭಾರತ ಸರ್ಕಾರ ಹೇಳಿತ್ತು. ಹೀಗಾಗಿ ಬ್ರಿಟನ್ನಿನ ಈ ವರದಿ ವಿವಾದಕ್ಕೀಡಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ‘ಇದು ದಾರಿತಪ್ಪಿಸುವ ಲೆಕ್ಕಾಚಾರ’ ಎಂದು ವರದಿಯನ್ನು ತಿರಸ್ಕರಿಸಿದೆ.
ಆಕ್ಸ್‌ಫರ್ಡ್ ವಿವಿ ಅಧ್ಯಯನ ತಂಡವೊಂದು ಭಾರತದ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5’ರ ವರದಿಯನ್ನು ಆಧರಿಸಿ ಸಮೀಕ್ಷೆ ನಡೆಸಿರುವುದಾಗಿ ಹೇಳಿಕೊಂಡಿದ್ದು, ಅದರಲ್ಲಿ 2020ರಲ್ಲಿ ಭಾರತದಲ್ಲಿ ಪ್ರತಿ ವರ್ಷಕ್ಕಿಂತ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ. ಭಾರತದಲ್ಲಿ ಆ ವರ್ಷ ಇಳಿಕೆಯಾದ ಜೀವಿತಾವಧಿಯ ದರದ ಆಧಾರದ ಮೇಲೆ ಈ ಸಂಖ್ಯೆ ತಮಗೆ ಲಭಿಸಿದೆ ಎಂದು ತಿಳಿಸಿದೆ. ತನ್ನ ವರದಿಯನ್ನು ಅದು ‘ಸೈನ್ಸ್ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟಿಸಿದೆ.
ಇದು ಭಾರತ ಸರ್ಕಾರ ಕೋವಿಡ್‌ನಿಂದ 2020ರಲ್ಲಿ ಭಾರತದಲ್ಲಿ ಸಂಭವಿಸಿದೆ ಎಂದು ಹೇಳಿದ ಸಾವಿಗಿಂತ ಎಂಟು ಪಟ್ಟು ಹೆಚ್ಚಾಗಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯು ಭಾರತದಲ್ಲಿ ಕೋವಿಡ್‌ನಿಂದ ಸಂಭವಿಸಿದೆ ಎಂದು ಹೇಳಿದ ಸಾವಿಗಿಂತ 1.5 ಪಟ್ಟು ಹೆಚ್ಚಿದೆ.
ಆಕ್ಸಫರ್ಡ್ ವರದಿ ಸ್ವೀಕಾರರ್ಹವಲ್ಲ: ಕೇಂದ್ರ ಸರ್ಕಾರ
ನವದೆಹಲಿ: ಕೋವಿಡ್‌ನಿಂದ ಭಾರತದಲ್ಲಿ 11.9 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಆಕ್ಸ್‌ಫರ್ಡ್ ವಿವಿ ವರದಿಗೆ ಆರೋಗ್ಯ ಇಲಾಖೆ ಪ್ರತಿಕ್ರಿಯಿಸಿದ್ದು, ‘ ಅಸಮರ್ಥನೀಯ ಮತ್ತು ಸ್ವೀಕಾರ್ಹವಲ್ಲ’ ಎಂದಿದೆ.‘ ಕೋವಿಡ್-19 ಉತ್ತುಂಗದಲ್ಲಿದ್ದ ಸಂದರ್ಭದಲ್ಲಿನ ಮಾದರಿ ಸಂಗ್ರಹಿಸಲಾಗಿದೆ. ಈ ವರದಿ ಸತ್ಯಾಂಶಕ್ಕೆ ದೂರವಾಗಿದೆ. ಭಾರತದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್‌ಎಸ್) ಶೇ.99ರಷ್ಟು ಸಾವಿನ ಬಗ್ಗೆ ನಿಖರ ಅಂಕಿ ಅಂಶವನ್ನೇ ಪ್ರಕಟಿಸುತ್ತದೆ. ಈ ವರದಿ 2015ರಲ್ಲಿ ಶೇ.75 ರಿಂದ 2020ಕ್ಕೆ ಶೇ. 99ರಷ್ಟು ನಿಖರ ಮಾಹಿತಿ ನೀಡಿತ್ತು. 2019ಕ್ಕೆ ಹೋಲಿಸಿದರೆ 2020ರಲ್ಲಿ ಸಾವಿನ ಸಂಖ್ಯೆ 4.74 ಲಕ್ಷದಷ್ಟು ಹೆಚ್ಚಳವಾಗಿದೆ. ಸಿಆರ್‌ಎಸ್‌ನಲ್ಲಿ ನೋಂದಣಿ ಆಗಿರುವ ಎಲ್ಲ ಸಾವುಗಳು ಸಾಂಕ್ರಾಮಿಕ ರೋಗದಿಂದ ಸಂಭವಿಸಿರುವುದಲ್ಲ.
ಸೈನ್ಸ್ ಅಡ್ವಾನ್ಸ್ ಪತ್ರಿಕೆಯಲ್ಲಿ 11.9 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎನ್ನುವ ವರದಿ ದಾರಿತಪ್ಪಿಸುವ ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕೇವಲ ಕೋವಿಡ್‌ನಿಂದಲ್ಲ. ಭಾರತದ ನೋಂದಣಿ ವ್ಯವಸ್ಥೆ(ಎಸ್‌ಆರ್‌ಎಸ್)ನಲ್ಲಿ 2020ಕ್ಕೆ ಹೋಲಿಸಿದರೆ 2019ರಲ್ಲಿಯೇ ಸಾವಿನ ದರ ಕಡಿಮೆಯಿದೆ. 2019ರಲ್ಲಿ 11.9ಲಕ್ಷಕ್ಕಿಂತ ಕಡಿಮೆ ಜನ ಸಾವನ್ನಪ್ಪಿದ್ದಾರೆ ಎಂದು ಎಸ್‌ಆರ್‌ಎಸ್ ಹೇಳಿದೆ. ಪತ್ರಿಕೆ ವರದಿಯಲ್ಲಿ ಕೆಲವೊಂದು ಅಸಮರ್ಪಕ ಮಾಹಿತಿಗಳನ್ನು ಉಲ್ಲೇಖಿಸಿದ್ದು, ದೋಷಪೂರಿತವಾಗಿದೆ.ಅಸಮರ್ಥನೀಯ ಮತ್ತು ಸ್ವೀಕಾರರ್ಹವಲ್ಲದ ಫಲಿತಾಂಶಗಳನ್ನು ನೀಡಿದೆ.