ಕೇರಳದ ಮೂಲಕ ದೇಶಕ್ಕೆ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ಮುಂಗಾರು ಪ್ರವೇಶ

| N/A | Published : May 25 2025, 01:45 AM IST / Updated: May 25 2025, 05:06 AM IST

Kerala Monsoon
ಕೇರಳದ ಮೂಲಕ ದೇಶಕ್ಕೆ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ಮುಂಗಾರು ಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ನೈಋತ್ಯ ಮುಂಗಾರು ಶನಿವಾರ ದಕ್ಷಿಣ ರಾಜ್ಯವಾದ ಕೇರಳದ ಮೂಲಕ ದೇಶವನ್ನು ಪ್ರವೇಶಿಸಿದೆ.

  ತಿರುವನಂತಪುರಂ : ಭಾರತದ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುವ ನೈಋತ್ಯ ಮುಂಗಾರು ಶನಿವಾರ ದಕ್ಷಿಣ ರಾಜ್ಯವಾದ ಕೇರಳದ ಮೂಲಕ ದೇಶವನ್ನು ಪ್ರವೇಶಿಸಿದೆ.

ಸಾಮಾನ್ಯವಾಗಿ ಜೂ.1ರಂದು ಕೇರಳ ಪ್ರವೇಶಿಸಿ ಜುಲೈ8ರ ಹೊತ್ತಿಗೆ ಇಡೀ ದೇಶಕ್ಕೆ ಆವರಿಸುತ್ತಿತ್ತು. ಬಳಿಕ ಸೆ.17ಕ್ಕೆ ವಾಯುವ್ಯದ ಕಡೆಯಿಂದ ನಿರ್ಗಮಿಸಲು ಶುರುವಾಗಿ ಅ.15ರ ಹೊತ್ತಿಗೆ ಮಾನ್ಸೂನ್‌ ಅಂತ್ಯವಾಗುತ್ತಿತ್ತು. ಆದರೆ ಈ ಸಲ 8 ದಿನಗಳ ಮೊದಲೇ ಆರಂಭವಾಗಿದೆ.

2009ರಲ್ಲಿ ಮೇ 23ರಂದು ಮಾನ್ಸೂನ್‌ ಪ್ರವೇಶವಾಗಿತ್ತು. ಅಂದರೆ 16 ವರ್ಷದಲ್ಲಿ ಮಾನ್ಸೂನ್‌ ಇಷ್ಟು ಬೇಗ ಆಗಮಿಸಿದ್ದು ಇದೇ ಮೊದಲು.ಮುಂಗಾರು ಪ್ರವೇಶ ಕೊಂಚ ಬೇಗವಾಗಿದೆಯಾದರೂ ದೇಶದ ವಿವಿಧ ಭಾಗಗಳಲ್ಲಿ ಸುರಿಯವ ಮಳೆಯ ಮೇಲೆ ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ಅಂಶಗಳು ಪರಿಣಾಮ ಬೀರುತ್ತವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2025ನೇ ಸಾಲಿನಲ್ಲಿ ‘ಎಲ್‌ ನಿನೋ’ ಪರಿಸ್ಥಿತಿ ಇರದೆ, ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ ಎಂದು ಇಲಾಖೆ ಏಪ್ರಿಲ್‌ನಲ್ಲೇ ಮುನ್ಸೂಚನೆ ನೀಡಿತ್ತು. 2024ರಲ್ಲಿ 934.8 ಎಂ.ಎಂ.(ಸರಾಸರಿಗಿಂತ ಶೇ.108ರಷ್ಟು ಅಧಿಕ) ಮಳೆಯಾಗಿತ್ತು. ಮಳೆ ವರ್ಗೀಕರಣ:ಸರಾಸರಿ 87 ಸೆಂ.ಮೀ. ಮಳೆಯಾದರೆ ಅದನ್ನು ‘ಸಾಮಾನ್ಯ ಮಳೆ’ ಎಂದು ಪರಿಗಣಿಸಲಾಗುತ್ತದೆ. ಅರ್ಥಾತ್‌ ಅಂದಾಜಿಸಿದ ಮಳೆಯಲ್ಲಿ ಶೇ.96ರಿಂದ ಶೇ.104ರಷ್ಟು ವರ್ಷಧಾರೆ ಸುರಿಯುತ್ತದೆ.

ಶೇ.90ಕ್ಕಿಂತ ಕಡಿಮೆಯಾದರೆ ಮಳೆ ಕೊರತೆ, ಶೇ.90-ಶೇ.95ರ ನಡುವಿದ್ದರೆ ಸಾಮಾನ್ಯಕ್ಕಿಂತ ಕಡಿಮೆ, ಶೇ.105-ಶೇ.110ರ ನಡುವೆ ಸಾಮಾನ್ಯಕ್ಕಿಂತ ಅಧಿಕ, ಶೇ.110ಕ್ಕಿಂತ ಜಾಸ್ತಿಯಾದರೆ ಅತಿ ಹೆಚ್ಚು ಮಳೆ ಎಂದು ಪರಿಗಣಿಸಲಾಗುತ್ತದೆ.

ಮುಂಗಾರು ಆಗಮನ ಬೆನ್ನಲ್ಲೇ ಕೇರಳದಲ್ಲಿ ಭಾರಿ ಮಳೆ

ತಿರುವನಂತಪುರಂ: ಸಾಮಾನ್ಯಕ್ಕಿಂತ 8 ದಿನ ಮೊದಲೇ ಕೇರಳ ಪ್ರವೇಶಿಸಿರುವ ಮುಂಗಾರು ಮಾರುತಗಳು ಕೇರಳದಲ್ಲಿ ಮೊದಲ ದಿನವೇ ಭಾರಿ ಮಳೆ ಸುರಿಸಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಕೆಲ ದಿನಗಳ ಕಾಲ ರೆಡ್‌ ಮತ್ತು ಆರೆಂಕ್‌ ಅಲರ್ಟ್‌ ಘೋಷಿಸಲಾಗಿದೆ.ಭಾರತೀಯ ಹವಾಮಾನ ಇಲಾಖೆಯು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಮತ್ತು ಇನ್ನು 12 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಜಾರಿ ಮಾಡಿದೆ. ಭಾನುವಾರ 5 ಜಿಲ್ಲೆಗಳಿಗೆ ಕೆಂಪು ಮತ್ತು 9 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಇರಲಿದೆ. ಸೋಮವಾರ 11ಕ್ಕೆ ರೆಡ್‌ ಮತ್ತು ಉಳಿದ 3 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಇರಲಿದೆ.

ಮೊದಲ ದಿನವೇ ಭಾರಿ ಮಳೆ:

ಶುಕ್ರವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮರಗಳು ಮತ್ತು ಬೀದಿದೀಪದ ಕಂಬಗಳು ಧರೆಗುರುಳಿ, ರಸ್ತೆಯಲ್ಲಿ ನೀರು ನಿಂತು, ಬೆಳಗಳೂ ನಾಶವಾಗಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಮರಗಳು ಬಿದ್ದು ಕೆಲ ಮನೆಗಳಿಗೂ ಹಾನಿಯಾಗಿದೆ.

‘ಕಲ್ಲಿಕೋಟೆ, ಇಡುಕ್ಕಿ ಮತ್ತು ಪತ್ತನಂತಿಟ್ಟದ ಉತ್ತರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಸುರಿಯಲಿರುವುದರಿಂದ ಮುನ್ನೆಚ್ಚರಿಕೆಯಿಲ್ಲದೆ ಹಲವೆಡೆ ಪ್ರವಾಹದಂತ ಪರಿಸ್ಥಿತಿ ಮತ್ತು ಭೂಕುಸಿತದಂತಹ ಸಮಸ್ಯೆಗಳು ಸಂಭವಿಸಬಹುದು’ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್‌ ಹೇಳಿದ್ದಾರೆ.

ತೆಯೇ, ‘ಅಧಿಕಾರಿಗಳು ಅಂತಹ ಎಲ್ಲಾ ಸಂದರ್ಭಗಳನ್ನು ನಿಭಾಯಿಸಲು ಸಿದ್ಧರಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಈ ಸಂಬಂಧ ನಿರ್ದೇಶನ ನೀಡಲಾಗಿದ್ದು, ಜಿಲ್ಲೆಗಳ ಪರಿಸ್ಥಿತಿ ತಿಳಿಯಲು ಅವರೊಂದಿಗೆ ಆನ್‌ಲೈನ್‌ ಸಭೆ ನಡೆಸುತ್ತೇನೆ’ ಎಂದಿದ್ದಾರೆ.ಸಾರ್ವನಿಕರಿಗೂ ಎಚ್ಚರದಿಂದಿರುವಂತೆ ಸೂಚಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಮಳೆಯ ಬಗೆಗಿನ ಪರಿಶೀಲಿಸದ ಮತ್ತು ಅನಧಿಕೃತ ಮಾಹಿತಿಯ ಬಗ್ಗೆಯೂ ಗಮನವಿಡುವಂತೆ ಸೂಚಿಸಲಾಗಿದೆ.

Read more Articles on