ಸಾರಾಂಶ
ನವದೆಹಲಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕಾ ನಿವೃತ್ತಿ ಹಿನ್ನೆಲೆಯಲ್ಲಿ ಕೊಲಿಜಿಯಂನಲ್ಲಿ ತೆರವಾಗಿರುವ ಸ್ಥಾನಕ್ಕೆ ಕರ್ನಾಟಕದವರಾದ ನ್ಯಾ। ಬಿ.ವಿ.ನಾಗರತ್ನ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿಗೆ ಕೊಲಿಜಿಂ ಎನ್ನುತ್ತಾರೆ. ಸುಪ್ರೀಂ ಕೋರ್ಟ್‌ನ 5ನೇ ಹಿರಿಯ ನ್ಯಾಯಾಧೀಶರಾಗಿರುವ ನ್ಯಾ। ನಾಗರತ್ನ ಮೇ 25 ರಿಂದ ಅಧಿಕೃತವಾಗಿ ಕೊಲಿಂಜಿಯಂ ಭಾಗವಾಗಲಿದ್ದಾರೆ. ಅವರು 2027ರ ಆ.29ರಂದು ನಿವೃತ್ತರಾಗಲಿದ್ದು, ಆ ತನಕ ಕೊಲಿಜಿಯಂನಲ್ಲಿ ಇರಲಿದ್ದಾರೆ. ಈ ಪ್ರಕಾರ ಸಮಿತಯ್ಲ್ಲಿ ಸಿಜೆಐ ಬಿ.ಆರ್.ಗವಾಯಿ, ನ್ಯಾ। ಸೂರ್ಯಕಾಂತ್, ನ್ಯಾ। ವಿಕ್ರಮ್ ನಾಥ್, ನ್ಯಾ। ಜೆ.ಕೆ. ಮಹೇಶ್ವರಿ ಹಾಗೂ ನ್ಯಾ। ನಾಗರತ್ನ ಅವರು ಇರಲಿದ್ದಾರೆ.
ನ್ಯಾ। ಬಿ.ವಿ. ನಾಗರತ್ನ ಅವರು ಬೆಂಗಳೂರಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಸುಪ್ರೀಂ ನ್ಯಾಯಾಧೀಶರಾಗಿ ಅವರ ಅಧಿಕಾರವಧಿ 2027ರ ಅ.29ರ ತನಕ ಇದೆ. ನಿವೃತ್ತಿಗೂ ಮುನ್ನ 2027ರ ಸೆ.23ರಿಂದ ಅವರಿಗೆ ಸುಪ್ರೀಂ ಸಿಜೆಐ ಆಗುವ ಅವಕಾಶವಿದೆ. ಈ ಮೂಲಕ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಮೂರ್ತಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ.