ಸಾರಾಂಶ
ನವದೆಹಲಿ : ದೇಶದ ಹೈ ಕೋರ್ಟ್‌ಗಳ ನ್ಯಾಯಾಧೀಶರಿಗೆ ನೀಡಲಾಗುವ ಪಿಂಚಣಿಯಲ್ಲಿನ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ, ಉಚ್ಚ ನ್ಯಾಯಾಲಯಗಳ ಹೆಚ್ಚುವರಿ ನ್ಯಾಯಾಧೀಶರು ಸೇರಿ ಎಲ್ಲಾ ಜಡ್ಜ್‌ಗಳಿಗೆ ಏಕರೀತಿಯ ಪೂರ್ಣ ಪಿಂಚಣಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ. ಈ ಪ್ರಕಾರ ಎಲ್ಲಾ ನಿವೃತ್ತ ಹೈಕೋರ್ಟ್ ಜಡ್ಜ್‌ಗಳಿಗೆ ವಾರ್ಷಿಕ 13.50 ಲಕ್ಷ ರು. ಪಿಂಚಣಿ ಹಾಗೂ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ 15 ಲಕ್ಷ ರು. ಪಿಂಚಣಿ ಇರಲಿದೆ.
ಈ ಮೊದಲು, ಹೈ ಕೋರ್ಟ್‌ನ ನ್ಯಾಯಾಧೀಶರು ನೇಮಕವಾದ ರೀತಿಯ ಆಧಾರದಲ್ಲಿ ಅವರಿಗೆ ನೀಡಲಾಗುವ ಪಿಂಚಣಿಯನ್ನು ನಿಗದಿಪಡಿಸಲಾಗುತ್ತಿತ್ತು. ಉದಾಹರಣೆಗೆ, ಜಿಲ್ಲಾ ನ್ಯಾಯಾಲಯಗಳಿಂದ ಹೈಕೋರ್ಟ್ ಜಡ್ಜ್ ಆದವರ ಅಥವಾ ವಕೀಲರಾಗಿದ್ದು ನೇರವಾಗಿ ಹೈಕೋರ್ಟ್ ನ್ಯಾಯಾಧೀಶರಾದರೆ ಅವರ ಪಿಂಚಣಿ ಮೊತ್ತದಲ್ಲಿ ವ್ಯತ್ಯಾಸ ಇರುತ್ತಿತ್ತು.
‘ಹೀಗೆ ಮಾಡುವುದರಿಂದ ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ನ್ಯಾಯಾಧೀಶರ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ’ ಎಂದಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಬಿ.ಆರ್. ಗವಾಯಿ, ಎ.ಜಿ. ಮಾಶಿ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಈ ಆದೇಶ ಹೊರಡಿಸಿದೆ. ಇದರ ಪ್ರಕಾರ, ನ್ಯಾಯಾಧೀಶರು ಜಿಲ್ಲಾ ನ್ಯಾಯಾಲಯಗಳಿಂದ ಅಥವಾ ವಕೀಲರಾಗಿದ್ದವರು ನೇರವಾಗಿ ಹೈಕೋರ್ಟ್‌ನ ಜಡ್ಜ್ ಆದರೆ ಅಥವಾ ಹೆಚ್ಚುವರಿ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದರೆ ಅಂಥವರೆಲ್ಲರಿಗೆ ವಾರ್ಷಿಕ 13.50 ಲಕ್ಷ ರು. ಪಿಂಚಣಿ ನೀಡಬೇಕು.
ಅಂತೆಯೇ, ಮುಖ್ಯ ನ್ಯಾಯಾಧೀಶರಾಗಿದ್ದವರಿಗೆ 15 ಲಕ್ಷ ರು, ಪಿಂಚಣಿ ನೀಡಬೇಕು. ಇದು, ಹಳೆಯ ಪಿಂಚಣಿ ಯೋಜನೆಯಡಿ ಬರುವ ಜಡ್ಜ್‌ಗಳಿಗೂ ಅನ್ವಯಿಸಲಿದೆ. ಈ ಜಡ್ಜ್‌ಗಳ ಸೇವಾವಧಿ ಇಲ್ಲಿ ನಗಣ್ಯ. ಎಷ್ಟೇ ವರ್ಷ ಕಾರ್ಯನಿರ್ವಹಿಸಿದ್ದರೂ ಏಕರೂಪದ ಪಿಂಚಣಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಅಂತೆಯೇ, ನ್ಯಾಯಾಧೀಶರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅವರ ಮಡದಿ ಅಥವಾ ಉತ್ತರಾಧಿಕಾರಿಗೆ ಪಿಂಚಣಿ ನೀಡಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನಿರ್ದೇಶಿಸಿದೆ. ಇದು ಖಾಯಂ ಮತ್ತು ಹೆಚ್ಚುವರಿ ನ್ಯಾಯಾಧೀಶರಿಗೆ ಅನ್ವಯಿಸುತ್ತದೆ.