ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಕೋಡು
ರಾಜ್ಯದ ಪ್ರಸಿದ್ಧ ಶಕ್ತಿ ದೇವತೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭಾನುವಾರ ಮಧ್ಯಾಹ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಇಲ್ಲಿನ ಬ್ಯಾಕೋಡು ಮಾರ್ಗದ ಮೂಲಕ ನೇರವಾಗಿ ಸಿಗಂದೂರು ದೇವಸ್ಥಾನಕ್ಕೆ ಆಗಮಿಸಿದರು. ಮಧ್ಯಾಹ್ನ 3 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿ, ದೇವಿ ದರ್ಶನ ಪಡೆದು ಗಂಧ ಪ್ರಸಾದ ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ಧರ್ಮಾಧಿಕಾರಿ ಎಸ್. ರಾಮಪ್ಪ ಅತ್ಮೀಯವಾಗಿ ಸ್ವಾಗತಿಸಿ, ದೇವಸ್ಥಾನದ ಪೂಜಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ನಂತರ ದೇವಸ್ಥಾನದ ಶ್ರೀ ನಂದಿಯನ್ನು ವೀಕ್ಷಿಸಿದರು .ನ್ಯಾಯಮೂರ್ತಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ತಂಡದಿಂದ ಸಿಗಂದೂರು, ಹೊಳೆಬಾಗಿಲಿನಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲ ಕಾಲ ದೇವಿ ದರ್ಶನಕ್ಕೆ ತಡೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ಕಾರ್ಯದರ್ಶಿ ಪಾರ್ವತಿ, ಪುತ್ರಿ ಲಾವಣ್ಯ, ದೇವಸ್ಥಾನದ ಅನುವಂಶಿಕ ಧರ್ಮಾಧಿಕಾರಿ ಎಸ್ ರಾಮಪ್ಪ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್, ಜಿಲ್ಲಾ ನ್ಯಾಯಾಲಯ ಹಾಗೂ ತಾಲೂಕು ನ್ಯಾಯಾಲಯದ ಪ್ರಮುಖರು, ಕಂದಾಯ ಇಲಾಖೆಯ ಅಧಿಕಾರಿಗಳು, ದೇವಸ್ಥಾನದ ಸಿಬ್ಬಂದಿ ಇದ್ದರು.
--------