2ನೇ ಸಲ ಚುನಾವಣೆಯಲ್ಲಿ ಗೆದ್ದು ದಾಖಲೆ : ಜಾರ್ಖಂಡ್ ಸಿಎಂ ಆಗಿ 28ಕ್ಕೆ ಸೊರೇನ್‌ ಪ್ರಮಾಣ ವಚನ

| Published : Nov 25 2024, 01:01 AM IST / Updated: Nov 25 2024, 04:42 AM IST

ಸಾರಾಂಶ

ಭರ್ಜರಿ ಬಹುಮತದೊಂದಿಗೆ ಸತತ 2ನೇ ಸಲ ಚುನಾವಣೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿರುವ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಅವರು ನ.28ರಂದು 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

 ರಾಂಚಿ :ಭರ್ಜರಿ ಬಹುಮತದೊಂದಿಗೆ ಸತತ 2ನೇ ಸಲ ಚುನಾವಣೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿರುವ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಅವರು ನ.28ರಂದು 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ ಜಾರ್ಖಂಡ್‌ನ 81 ಸ್ಥಾನಗಳ ಪೈಕಿ 56ರಲ್ಲಿ ಜಯಭೇರಿ ಬಾರಿಸಿದೆ. ಭಾನುವಾರ ಸಭೆ ಸೇರಿದ ನೂತನ ಶಾಸಕರು ಹೇಮಂತ್‌ ಸೊರೇನ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರು.

ಬೆನ್ನಲ್ಲೇ ಸೊರೇನ್‌ ನೇತೃತ್ವದ ನಿಯೋಗ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರನ್ನು ಭೇಟಿಯಾಗಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿತು. ಇದೇ ವೇಳೆ, ಸೊರೇನ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಿತ್ರಪಕ್ಷಗಳು ಬೆಂಬಲ ನೀಡಿರುವ ಪತ್ರದ ಜತೆಗೆ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದೇನೆ. ನ.28ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

2000ರ ನ.15ರಂದು ಜನ್ಮತಾಳಿದ ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್‌ ಸೊರೇನ್‌ ಶಪಥಗ್ರಹಣ ಮಾಡಲಿದ್ದಾರೆ. ಜಾರ್ಖಂಡ್‌ ಇತಿಹಾಸದಲ್ಲೇ ಸತತ 2ನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಮೊದಲಿಗ ಅವರಾಗಿದ್ದಾರೆ.

28ರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಇಂಡಿಯಾ ಕೂಟದ ನಾಯಕರಾದ ರಾಹುಲ್‌ ಗಾಂಧಿ, ಅರವಿಂದ ಕೇಜ್ರಿವಾಲ್‌, ಮಮತಾ ಬ್ಯಾನರ್ಜಿ, ಅಖಿಲೇಶ್‌ ಯಾದವ್‌ ಮತ್ತಿತರರು ಆಗಮಿಸುವ ನಿರೀಕ್ಷೆ ಇದೆ.