ಸಾರಾಂಶ
ಬಾಡಿಗೆ ಕಾರು, ಬಾಡಿಗೆ ಮನೆ ಬಗ್ಗೆ ಕೇಳಿರುತ್ತೀರಿ.. ಆದರೆ ಬಾಡಿಗೆ ಕೋಳಿ ಎಂಬ ಬಗ್ಗೆ ಕೇಳಿರಲು ಸಾಧ್ಯವೆ? ಅಮೆರಿಕದಲ್ಲಿ ಮೊಟ್ಟೆಗೋಸ್ಕರ ಕೋಳಿಗಳನ್ನೂ ಬಾಡಿಗೆಗೆ ಕೊಡುವ ವ್ಯವಸ್ಥೆ ಶುರುವಾಗಿದೆ!
ವಾಷಿಂಗ್ಟನ್: ಬಾಡಿಗೆ ಕಾರು, ಬಾಡಿಗೆ ಮನೆ ಬಗ್ಗೆ ಕೇಳಿರುತ್ತೀರಿ.. ಆದರೆ ಬಾಡಿಗೆ ಕೋಳಿ ಎಂಬ ಬಗ್ಗೆ ಕೇಳಿರಲು ಸಾಧ್ಯವೆ? ಅಮೆರಿಕದಲ್ಲಿ ಮೊಟ್ಟೆಗೋಸ್ಕರ ಕೋಳಿಗಳನ್ನೂ ಬಾಡಿಗೆಗೆ ಕೊಡುವ ವ್ಯವಸ್ಥೆ ಶುರುವಾಗಿದೆ!
ಹೌದು.. ಅಮೆರಿಕದಲ್ಲಿ ಏವಿಯನ್ ಫ್ಲು ಎಂಬ ಹಕ್ಕಿಜ್ವರ ಕಾಣಿಸಿಕೊಂಡ ಬಳಿಕ ಕೋಟ್ಯಂತರ ಕೋಳಿಗಳು ಸಾವನ್ನಪ್ಪಿವೆ. ಪರಿಣಾಮ ಕೋಳಿಮೊಟ್ಟೆಯ ಬೆಲೆ ಗಗನಕ್ಕೇರಿದೆ. ಕೆಲ ನಗರಗಳಲ್ಲಿ ಡಜನ್ ಮೊಟ್ಟೆ ಬೆಲೆ ಸುಮಾರು 866 ರು. (10 ಡಾಲರ್ ಅಥವಾ 1 ಮೊಟ್ಟೆಗೆ 72 ರು.) ಕೂಡ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ‘ರೆಂಟ್ ದಿ ಚಿಕನ್’ ಎಂಬ ಕಂಪನಿ ಜನರಿಗೆ ಕೈಗೆಟಕುವ ದರದಲ್ಲಿ ಮೊಟ್ಟೆ ಒದಗಿಸುವುದಕ್ಕೋಸ್ಕರ ಹೊಸ ಯೋಜನೆಯನ್ನು ಆರಂಭಿಸಿದೆ.ಕಂಪನಿಯ ಸಹ-ಸಂಸ್ಥಾಪಕ ಜೆನ್ ಟಾಂಪ್ಕಿನ್ಸ್ ಅವರು ಹೇಳುವಂತೆ, ದುಬಾರಿ ಬೆಲೆ ಕೊಟ್ಟು ಮೊಟ್ಟೆ ಖರೀದಿಸುವ ಬದಲು, ಜನರಿಗೆ ಕೋಳಿಗಳನ್ನು ಕಂಪನಿಯವರೇ ಬಾಡಿಗೆಗೆ ಕೊಡುತ್ತಾರೆ. 2 ಕೋಳಿಗಳು ವಾರಕ್ಕೆ ಸುಮಾರು 1 ಡಜನ್ ಮೊಟ್ಟೆಗಳನ್ನು ಇಡುತ್ತವೆ. ಬಾಡಿಗೆಗೆ ನೀಡಿದ ಅವಧಿ ಮುಗಿದ ನಂತರ ಕಂಪನಿಯವರು ಕೋಳಿಗಳನ್ನು ವಾಪಸ್ ಪಡೆಯುತ್ತಾರೆ. ಆದರೆ ಆ ಅವಧಿಯಲ್ಲಿ ಕೋಳಿ ಹಾಕಿದ ಅಷ್ಟೂ ಮೊಟ್ಟೆಗಳನ್ನು ಜನ ಬಳಸಿಕೊಳ್ಳಬಹುದಾಗಿದೆ.
ಈ ಹೊಸ ಟ್ರೆಂಡ್ ಅಮೆರಿಕದಲ್ಲಿ ಭಾರೀ ಸದ್ದು ಮಾಡಿದ್ದು, ಬಾಡಿಗೆ ಕೋಳಿಗಳಿಗಾಗಿ ಜನ ಮುಗಿಬಿದ್ದಿದ್ದಾರೆ.