ಸಾರಾಂಶ
ಶಿಮ್ಲಾ: ಜನರಿಗೆ ಉಚಿತ ಯೋಜನೆಗಳನ್ನು ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಇದೀಗ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಆರಂಭವಾಗಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿ ವಾಪಸ್ ನೀಡಿದ್ದಾರೆ. ಅಲ್ಲದೇ ಇತರೆ ಅರ್ಹರಿಗೂ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ.
ಸುಖು ಅವರು ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ 5 ವಿದ್ಯುತ್ ಸಂಪರ್ಕಗಳಿಗೆ ಸಿಗುತ್ತಿದ್ದ ವಿದ್ಯುತ್ ಸಬ್ಸಿಡಿಯನ್ನು ಹಿಂದಿರುಗಿಸಿದ್ದು, ಬಹು ವಿದ್ಯುತ್ ಸಂಪರ್ಕವನ್ನು ಹೊಂದಿರುವ ಜನರು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಬ್ಸಿಡಿಯನ್ನು ವಾಪಸ್ ನೀಡುವಂತೆ ಕೋರಿದ್ದಾರೆ.
ಈ ಬಗ್ಗೆ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ವಾರ್ಷಿಕ 2,200 ಕೋಟಿ ರು. ಖರ್ಚು ಮಾಡುತ್ತದೆ. ವಿದ್ಯುತ್ ಇಲಾಖೆಯ ನೌಕರರ ಸಂಬಳ ಮತ್ತು ಪಿಂಚಣಿಗಾಗಿ ತಿಂಗಳಿಗೆ 200 ಕೋಟಿ ರು. ಖರ್ಚು ಮಾಡುತ್ತಿದೆ. ಸಬ್ಸಿಡಿ ಅಗತ್ಯ ಇರುವವರಿಗೆ ಮೀಸಲು. ಅನುಕೂಲಸ್ಥರು ರಾಜ್ಯದ ಅಭಿವೃದ್ಧಿ ಕಾರಣಕ್ಕೆ ವಾಪಸ್ ನೀಡಬೇಕು’ ಎಂದಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ರಾಜ್ಯದಲ್ಲಿ ಹಲವು ವೆಚ್ಚಗಳಿಗೆ ಕಡಿವಾಣ ಹಾಕಿತ್ತು. ಸಿಎಂ, ಪಕ್ಷದ ಶಾಸಕರು,ಉನ್ನತ ಅಧಿಕಾರಿಗಳ ವೇತನ ಪಾವತಿಯಲ್ಲಿ ವಿಳಂಬವಾಗಿತ್ತು. ಅಲ್ಲದೇ ಕೆಲ ಸರ್ಕಾರಿ ಹೋಟೆಲ್‌ಗಳನ್ನು ಕೂಡ ಮಾರಾಟ ಮಾಡಲಾಗಿತ್ತು. ಅನರ್ಹ ಶಾಸಕರಿಗೆ ಪಿಂಚಣಿ ನಿಲ್ಲಿಸುವ ನಿರ್ಧಾರ ಪ್ರಕಟಿಸಿತ್ತು. ಉದ್ಯಮ, ಹೋಟೆಲ್‌ಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ಕಡಿತ ಮಾಡಲಾಗಿತ್ತು.