ಹಿಮಾಚಲ ಸರ್ಕಾರ ಉಳಿಸಿದ ಡಿಕೆಶಿ!

| Published : Mar 01 2024, 02:17 AM IST / Updated: Mar 01 2024, 07:49 AM IST

ಸಾರಾಂಶ

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ನಡೆದ ಕಾರಣ ಪದಚ್ಯುತಿ ಭೀತಿ ಎದುರಿಸುತ್ತಿದ್ದ ಹಿಮಾಚಲ ಪ್ರದೇಶ ಸರ್ಕಾರ ಈಗ ಪತನ ಭೀತಿಯಿಂದ ಪಾರಾಗಿದೆ.

ಶಿಮ್ಲಾ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ನಡೆದ ಕಾರಣ ಪದಚ್ಯುತಿ ಭೀತಿ ಎದುರಿಸುತ್ತಿದ್ದ ಹಿಮಾಚಲ ಪ್ರದೇಶ ಸರ್ಕಾರ ಈಗ ಪತನ ಭೀತಿಯಿಂದ ಪಾರಾಗಿದೆ. ಸರ್ಕಾರವನ್ನು ಪಾರು ಮಾಡುವಲ್ಲಿ ಕಾಂಗ್ರೆಸ್‌ ‘ಟ್ರಬಲ್‌ ಶೂಟರ್‌’ ಎಂದೇ ಖ್ಯಾತರಾಗಿರುವ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಧಾನ ಪಾತ್ರ ವಹಿಸಿದ್ದು ಪಕ್ಷದ ಪಾಲಿಗೆ ಆಪತ್ಭಾಂದವನಾಗಿ ಹೊರಹೊಮ್ಮಿದ್ದಾರೆ.

ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದ 6 ಕಾಂಗ್ರೆಸ್‌ ಶಾಸಕರನ್ನು ಹಿಮಾಚಲ ಪ್ರದೇಶದ ವಿಧಾನಸಭೆಯ ಸ್ಪೀಕರ್‌ ಗುರುವಾರ ಅನರ್ಹ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್‌, ಮರಳಿ ಬಹುಮತ ಪಡೆದಿದೆ. ಹೀಗಾಗಿ ತಕ್ಷಣಕ್ಕೆ ಪತನದ ಭೀತಿಯಿಂದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬಚಾವ್‌ ಆಗಿದೆ. 

ಇದರ ಹಿಂದೆ ಕಾಂಗ್ರೆಸ್‌ ಬಿಕ್ಕಟ್ಟು ಪರಿಹರಿಸಲು ವೀಕ್ಷಕರಾಗಿ ಎಐಸಿಸಿಯಿಂದ ನಿಯೋಜಿತರಾಗಿದ್ದ ಡಿ.ಕೆ.ಶಿವಕುಮಾರ್‌ ಅವರ ರಣತಂತ್ರ ಪ್ರಧಾನ ಪಾತ್ರ ವಹಿಸಿದೆ.ಆದರೆ ಅನರ್ಹತೆ ಪ್ರಶ್ನಿಸಿ 6 ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದ್ದಾರೆ.

6 ಶಾಸಕರು ಅನರ್ಹ:ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿಪ್‌ ಜಾರಿ ಆಗಿದ್ದರೂ 6 ಶಾಸಕರು ಬಿಜೆಪಿಗೆ ಮತ ಹಾಕಿದ್ದರು ಮತ್ತು ಬಜೆಟ್‌ ಮೇಲಿನ ಮತದಾನದ ವೇಳೆ ಗೈರಾಗಿದ್ದರು. ಹೀಗಾಗಿ ಪಕ್ಷದ ವಿಪ್‌ ಉಲ್ಲಂಘಿಸಿದ ಕಾರಣ ನೀಡಿ ಕಾಂಗ್ರೆಸ್‌ನ 6 ಶಾಸಕರಾದ ರಾಜಿಂದರ್‌ ರಾಣಾ, ಸುಧೀರ್ ಶರ್ಮಾ, ಇಂದರ್‌ ದತ್‌ ಲಖನ್‌ಪಾಲ್‌, ದೇವಿಂದರ್‌ ಕುಮಾರ್‌ ಭುಟ್ಟೋ, ರವಿ ಠಾಕೂರ್‌ ಮತ್ತು ಚೇತನ್ಯಾ ಶರ್ಮಾ ಅವರನ್ನು ಸ್ಪೀಕರ್ ಪಠಾನಿಯಾ ಅನರ್ಹ ಮಾಡಿ ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯ ಬಲ 34ಕ್ಕೆ ಇಳಿದಿದೆ. ಆದರೆ 6 ಶಾಸಕರ ಅನರ್ಹತೆ ಕಾರಣ ಸದನದ ಒಟ್ಟಾರೆ ಸದಸ್ಯ ಬಲ 68ರಿಂದ 62ಕ್ಕೆ ಇಳಿದಿದ್ದು, ಕಾಂಗ್ರೆಸ್‌ಗೆ ವರದಾನವಾಗಿದೆ. ಬಹುಮತಕ್ಕೆ 32 ಸೀಟು ಈಗ ಸಾಕು. ಹೀಗಾಗಿ ವಿಧಾನಸಭೆಯಲ್ಲಿ 34 ಸದಸ್ಯರೊಂದಿಗೆ ಕಾಂಗ್ರೆಸ್‌ ಮರಳಿ ಬಹುಮತ ಹೊಂದಿದಂತಾಗಿದೆ.

ಇದಕ್ಕೂ ಮೊದಲೂ 68 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 40 ಶಾಸಕರು ಇದ್ದರು. ಮೂವರು ಪಕ್ಷೇತರ ಬೆಂಬಲ ಇತ್ತು. ಬಿಜೆಪಿ 25 ಸದಸ್ಯರನ್ನು ಹೊಂದಿತ್ತು. ಆದರೆ ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನ 6 ಮತ್ತು 3 ಪಕ್ಷೇತರು ಬಿಜೆಪಿ ಬೆಂಬಲಿಸಿದ್ದ ಕಾರಣ, ಬಹುಮತಕ್ಕೆ ಅಗತ್ಯವಾದ 35 ಸ್ಥಾನಬಲ ಇಲ್ಲದೇ ಸರ್ಕಾರ ಪತನದ ಭೀತಿ ಎದುರಿಸುವಂತಾಗಿತ್ತು.

ಡಿಕೆಶಿ ಸರ್ಕಾರ ಕಾಪಾಡಿದ್ದು ಹೇಗೆ?:

2 ದಿನದ ಹಿಂದೆ ರಾಜ್ಯಸಭಾ ಚುನಾವಣೆ ಬಳಿಕ ಹಿಮಾಚಲದಲ್ಲಿ ಕಾಂಗ್ರೆಸ್‌ ಸರ್ಕಾರ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ರಾತ್ರೋರಾತ್ರಿ ಡಿಕೆಶಿಗೆ ಬುಲಾವ್‌ ನೀಡಲಾಗಿತ್ತು. ಹೀಗೆ ಅಲ್ಲಿಗೆ ಬುಧವಾರ ತೆರಳಿದ ಡಿಕೆಶಿ ಮೊದಲಿಗೆ, ಹೊಸದಾಗಿ ಬಂಡೆದ್ದು ರಾಜೀನಾಮೆ ನೀಡಿದ್ದ ಸಚಿವ ವಿಕ್ರಮಾದಿತ್ಯ ಸಿಂಗ್‌ ಅವರ ಮನವೊಲಿಸಿ ರಾಜೀನಾಮೆ ಹಿಂಪಡೆಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಸರ್ಕಾರಕ್ಕೆ ಮೊದಲ ಗಂಡಾಂತರ ತಪ್ಪಿಸಿದರು.

ಈ ನಡುವೆ, ಮುಖ್ಯಮಂತ್ರಿ ಸುಖು ಹಾಗೂ ಡಿಕೆಶಿ ಗುರುವಾರ ಬೆಳಗ್ಗೆ ಪಕ್ಷದ ಶಾಸಕರೊಂದಿಗೆ ಉಪಹಾರ ಕೂಟ ನಡೆಸಿ ಒಗ್ಗಟ್ಟಿನ ಪ್ರದರ್ಶನ ಮಾಡಿಸಿದರು. ಸಭೆಯಲ್ಲಿದ್ದ ಡಿಕೆಶಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಭರವಸೆ ನೀಡಿದರು. ಬಳಿಕ 6 ಶಾಸಕರನ್ನು ಅನರ್ಹ ಮಾಡುವ ಸುದ್ದಿ ಹೊರಬಿತ್ತು. ಈ ಮೂಲಕ ಸದನದ ಬಲವನ್ನೇ ಕುಗ್ಗಿಸಿ ಸರ್ಕಾರದ ಬಹುಮತ ಕಾಪಾಡಿದ್ದಾರೆ.

ಸರ್ಕಾರಕ್ಕೆ ಇನ್ನು ಅಪಾಯವಿಲ್ಲಎಲ್ಲಾ ಸಮಸ್ಯೆಗಳೂ ಬಗೆಹರಿದಿವೆ. ನಾವು ಎಲ್ಲಾ ಶಾಸಕರ ಅಭಿಪ್ರಾಯ ಆಲಿಸಿದ್ದೇವೆ. ಈ ಸರ್ಕಾರ ತನ್ನ 5 ವರ್ಷಗಳ ಅವಧಿ ಪೂರೈಸಲಿದೆ. ಸರ್ಕಾರಕ್ಕೆ ಇನ್ನು ಯಾವುದೇ ಅಪಾಯವಿಲ್ಲ. ಸಿಎಂ ಕೂಡ ಬದಲಿಲ್ಲ. ಸರ್ಕಾರ-ಪಕ್ಷದ ನಡುವೆ ಸಮನ್ವಯಕ್ಕಾಗಿ ಸಮಿತಿ ರಚನೆ ಮಾಡಲಾಗುವುದು.-ಡಿ.ಕೆ.ಶಿವಕುಮಾರ್‌, ಕರ್ನಾಟಕ ಡಿಸಿಎಂ/ ಹಿಮಾಚಲ ಕಾಂಗ್ರೆಸ್‌ ವೀಕ್ಷಕ