ಕಾಂಗ್ರೆಸ್‌ ಆಡಳಿತದ ಹಿಮಾಚಲದಲ್ಲಿ ಇಂದು ಸಾರ್ವಜನಿಕ ರಜೆ ಘೋಷಣೆ

| Published : Jan 22 2024, 02:17 AM IST

ಸಾರಾಂಶ

ಹಿಮಾಚಲ ಪ್ರದೇಶದಲ್ಲಿ ರಾಮಮಂದಿರ ಉದ್ಘಾಟನೆಯ ಪ್ರಯುಕ್ತ ರಾಜ್ಯ ಸರ್ಕಾರದಿಂದ ಸಂಪೂರ್ಣ ದಿನ ರಜೆ ಘೋಷಿಸಲಾಗಿದೆ. ಮನೆಗಳಲ್ಲಿ ದೀಪ ಬೆಳಗಳಲೂ ಸಿಎಂ ಸುಖು ಕರೆ ನೀಡಿದ್ದಾರೆ.

ಶಿಮ್ಲಾ: ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಜ.22ರ ಸೋಮವಾರ ಒಂದು ದಿನದ ಸಾರ್ವತ್ರಿಕ ರಜೆ ಘೋಷಿಸಿದೆ.

ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ಎಲ್ಲಾ ರಾಜ್ಯಗಳು ಪೂರ್ಣ ಅಥವಾ ಅರ್ಧ ದಿನದ ರಜೆ ಘೋಷಣೆ ಮಾಡಿದ್ದವಾದರೂ, ಕಾಂಗ್ರೆಸ್‌ದ ಆಡಳಿತದ ರಾಜ್ಯವೊಂದು ರಜೆ ಘೋಷಣೆ ಮಾಡಿದ ಮೊದಲ ಪ್ರಕರಣ ಇದಾಗಿದೆ.ಭಾನುವಾರ ಇಲ್ಲಿನ ರಾಮಮಂದಿರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು, ‘ರಾಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯಲ್ಲ. ಆತ ಎಲ್ಲರಿಗೂ ಮಾದರಿ ವ್ಯಕ್ತಿ ಮತ್ತು ದೇಶದ ಸಂಸ್ಕೃತಿಯ ಪ್ರತೀಕ. ಹೀಗಾಗಿಯೇ ಕೇಂದ್ರ ಸರ್ಕಾರ ಸೋಮವಾರ ಅರ್ಧ ದಿನ ರಜೆ ಕೊಟ್ಟಿದ್ದರೆ ನಾವು ಪೂರ್ಣ ದಿನ ರಜೆ ಕೊಟ್ಟಿದ್ದೇವೆ. ಜೊತೆಗೆ ರಾಜ್ಯದ ಎಲ್ಲಾ ನಾಗರಿಕರಿಗೂ ಸೋಮವಾರ ಮನೆಮನೆಗಳಲ್ಲೂ ದೀಪ ಬೆಳಗುವಂತೆ’ ಕರೆ ನೀಡಿದರು.

ಕಾಶ್ಮೀರದಲ್ಲೂ ರಜೆ:ಜಮ್ಮು ಮತ್ತು ಕಾಶ್ಮೀರದ ಆಡಳಿತ ಕೂಡಾ ಸೋಮವಾರ ಅರ್ಧ ದಿನ ಸರ್ಕಾರಿ ರಜೆ ಘೋಷಿಸಿದೆ. ಜೊತೆಗೆ ದಿನವಿಡೀ ಮದ್ಯ ಮಾರಾಟವನ್ನೂ ನಿಷೇಧ ಮಾಡಿದೆ.

ರಜೆ ಪ್ರಶ್ನಿಸಿದ್ದ ವಿದ್ಯಾರ್ಥಿಗಳಿಗೆ ತಪರಾಕಿ:ಸೋಮವಾರ ರಜೆ ನೀಡಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ ಮತ್ತು ಗುಜರಾತ್‌ನ ನಾಲ್ವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ವಜಾ ಮಾಡಿದೆ. ಇದೊಂದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಹೊಂದಿದ ಅರ್ಜಿಯಾಗಿದೆ. ಇದನ್ನು ಬೇರೆಯಾದರೂ ಸಲ್ಲಿಸಿದ್ದರೆ ನಾವು ದಂಡ ಹಾಕುತ್ತಿದ್ದೆವು. ಆದರೆ ವಿದ್ಯಾರ್ಥಿಗಳು ಎನ್ನುವ ಕಾರಣಕ್ಕೆ ಸುಮ್ಮನೆ ಬಿಟ್ಟಿದ್ದೇವೆ. ಇಂಥ ಅರ್ಜಿ ಸಲ್ಲಿಸುವ ಬದಲು ಬೇರೇನಾದರೂ ಉತ್ತಮ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ’ ಎಂದು ಎಚ್ಚರಿಸಿ ಅರ್ಜಿ ಮಾಡಿದೆ.